ಮಂಗಳೂರು: ಎಳನೀರು ಕುಡಿದು 15 ಮಂದಿ ಅಸ್ವಸ್ಥರಾಗಿದ್ದಾರೆ. ಆಡ್ಯಾರ್ ನಲ್ಲಿರುವ ಎಳನೀರು ಫ್ಯಾಕ್ಟರಿಯೊಂದರಿಂದ ಎಳನೀರು ಕುಡಿದ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಪ್ರದೇಶದ 15 ನಿವಾಸಿಗಳು ವಾಂತಿ ಭೇದಿಯಿಂದಾಗಿ ಅಸ್ವಸ್ಥರಾಗಿದ್ದಾರೆ.
ಈ ಫ್ಯಾಕ್ಟರಿಯಲ್ಲಿ ಲೀಟರ್ ಗೆ 40 ರೂ. ದರದಲ್ಲಿ ಎಳನೀರು ಮಾರಾಟ ಮಾಡಲಾಗುತ್ತಿತ್ತು. ಸೋಮವಾರ ಸಂಜೆ ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರು ಪ್ರದೇಶದ ಸಾರ್ವಜನಿಕರು ಮಂಗಳವಾರದಿಂದ ವಾಂತಿ ಬೇಧಿಯಿಂದ ಅಸ್ವಸ್ಥರಾಗಿದ್ದಾರೆ. ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆದು ಕೆಲವರು ಗುಣಮುಖರಾಗಿದ್ದಾರೆ. ಮೂವರು ತೀವ್ರ ಅಸ್ವಸ್ಥರಾಗಿದ್ದು ಫಳ್ನೀರ್, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ.
ಬುಧವಾರ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗೆ ದೂರು ಸಲ್ಲಿಕೆಯಾಗಿದ್ದು, ಇವರು ಆಡ್ಯಾರ್ ನಲ್ಲಿರುವ ಎಳನೀರು ಫ್ಯಾಕ್ಟರಿಗೆ ಭೇಟಿ ನೀಡಿ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ. ತಾತ್ಕಾಲಿಕವಾಗಿ ಫ್ಯಾಕ್ಟರಿ ಬಂದ್ ಮಾಡಿ ಶುಚಿಗೊಳಿಸಲಾಗಿದೆ.