ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ನಿವೃತ್ತ ಎಸ್.ಪಿ. ಒಬ್ಬರಿಗೆ ಬೆಂಗಳೂರು ನಗರದ 78ನೇ ಸಿಸಿಎಚ್ ನ್ಯಾಯಾಲಯ ಒಂದು ಕೋಟಿ ರೂಪಾಯಿ ದಂಡ ಹಾಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 15 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಈ ಮಹತ್ವದ ತೀರ್ಪು ಹೊರ ಬಿದ್ದಿದೆ.
ಪ್ರಕರಣದ ವಿವರ: 2007ರಲ್ಲಿ ಯಲಹಂಕದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದ ಶ್ರೀನಿವಾಸ್ ಅಯ್ಯರ್ ಅವರ ನಿವಾಸದ ಮೇಲೆ ತಮಗೆ ಸಿಕ್ಕ ಮಾಹಿತಿ ಆಧಾರದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದರು.
ದಾಳಿಯ ವೇಳೆ ಶ್ರೀನಿವಾಸ್ ಅಯ್ಯರ್ 1.16 ಕೋಟಿ ರೂಪಾಯಿ ಸಂಪಾದಿಸಿದ್ದು, ಈ ಪೈಕಿ 40.60 ಲಕ್ಷ ರೂಪಾಯಿ ಸಂಪಾದನೆಗೆ ಸಮರ್ಪಕ ಮಾಹಿತಿ ನೀಡಲು ವಿಫಲರಾಗಿದ್ದರು. ಇದು ಅಕ್ರಮ ಆಸ್ತಿ ಎಂಬುದನ್ನು ಪತ್ತೆ ಹಚ್ಚಿದ್ದ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯಿದೆ ಅಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದರ ವಿಚಾರಣೆ ಸುದೀರ್ಘವಾಗಿ ನಡೆದಿದ್ದು, ಅಂತಿಮವಾಗಿ ಜೂನ್ 28ರಂದು ತೀರ್ಪು ಹೊರಬಿದ್ದಿದೆ. 78ನೇ ಸಿಸಿಎಚ್ ನ್ಯಾಯಾಧೀಶ ಎಸ್.ವಿ. ಶ್ರೀಕಾಂತ್ ಆದೇಶ ಹೊರಡಿಸಿದ್ದು, ಶ್ರೀನಿವಾಸ್ ಅಯ್ಯರ್ 1 ಕೋಟಿ ರೂಪಾಯಿ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಎರಡು ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.