ಮಕ್ಕಳ ರಕ್ಷಣೆಗಾಗಿ ತಾಯಿ ಎಂಥಾ ಸಾಹಸಕ್ಕೆ ಬೇಕಾದ್ರೂ ಸಿದ್ಧವಿರ್ತಾಳೆ. ಇದಕ್ಕೆ ತಾಜಾ ನಿದರ್ಶನ ಮಧ್ಯಪ್ರದೇಶದ ಹಳ್ಳಿಯೊಂದರ 25 ವರ್ಷದ ಮಹಿಳೆ. ಈಕೆ ತನ್ನ 15 ತಿಂಗಳ ಮಗುವನ್ನು ಕಾಪಾಡಲು ಹುಲಿಯೊಂದಿಗೆ ಹೋರಾಟ ನಡೆಸಿದ್ದಾಳೆ.
ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿರೋ ಉಮಾರಿಯಾ ಜಿಲ್ಲೆಯ ರೊಹನಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರ್ಚನಾ ಚೌಧರಿ ಎಂಬ ಮಹಿಳೆ ಮಲವಿಸರ್ಜನೆಗಾಗಿ ತನ್ನ 15 ತಿಂಗಳ ಮಗನನ್ನು ಹೊಲಕ್ಕೆ ಕರೆದೊಯ್ದಿದ್ದಳು. ಈ ವೇಳೆ ಹುಲಿಯೊಂದು ಮಗುವಿನ ಮೇಲೆ ದಾಳಿ ಮಾಡಿದೆ.
ಮಗುವನ್ನು ದವಡೆಯಲ್ಲಿ ಕಚ್ಚಿ ಹಿಡಿದುಕೊಂಡುಬಿಟ್ಟಿದೆ. ಮಗುವನ್ನು ಕಾಪಾಡಲು ಮುಂದಾದಾಗ ಅರ್ಚನಾಳ ಮೇಲೂ ದಾಳಿ ಮಾಡಿದೆ. ಆದ್ರೆ ಗಾಯಗೊಂಡಿದ್ದ ಅರ್ಚನಾ ಛಲ ಬಿಡಲೇ ಇಲ್ಲ. ಗ್ರಾಮಸ್ಥರನ್ನು ಕೂಗಿ ಕರೆದಿದ್ದಾಳೆ. ಮಗುವನ್ನು ಹುಲಿಯ ದವಡೆಯಿಂದ ಹೊರಕ್ಕೆಳೆದಿದ್ದಾಳೆ. ಆಕೆಯ ಕೂಗು ಕೇಳಿ ಗ್ರಾಮಸ್ಥರೆಲ್ಲ ಸ್ಥಳಕ್ಕೆ ಓಡಿ ಬಂದಿದ್ದರು. ಜನರನ್ನು ನೋಡಿದ ಹುಲಿ, ಮಗುವನ್ನು ಅಲ್ಲೇ ಬಿಟ್ಟು ಕಾಡಿಗೆ ಪರಾರಿಯಾಗಿದೆ.
ಹುಲಿ ದಾಳಿಯಲ್ಲಿ ಅರ್ಚನಾಳ ಸೊಂಟ, ಕೈ ಮತ್ತು ಬೆನ್ನಿಗೆ ಗಾಯಗಳಾಗಿವೆ. ಮಗುವಿನ ತಲೆ ಮತ್ತು ಬೆನ್ನಿಗೆ ಸಹ ಗಾಯವಾಗಿದ್ದು, ತಕ್ಷಣವೇ ಇಬ್ಬರನ್ನೂ ಉಮಾರಿಯಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯ್ತು. ಮಗು ಮತ್ತು ತಾಯಿಯ ಮೇಲೆ ದಾಳಿ ಮಾಡಿದ ಹುಲಿಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.