
ನವದೆಹಲಿ: ಕೇಂದ್ರೀಯ ತನಿಖಾ ದಳದ(ಸಿಬಿಐ) 15 ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ 12 ಸೇರಿದಂತೆ 140 ಪೊಲೀಸ್ ಅಧಿಕಾರಿಗಳನ್ನು ಈ ವರ್ಷದ ಕೇಂದ್ರ ಗೃಹ ಸಚಿವರ ತನಿಖಾ ವಿಭಾಗದ ಶ್ರೇಷ್ಠ ಪದಕಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿದೆ.
140 ಮಂದಿಯಲ್ಲಿ, 2020 ರಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದ ತನಿಖೆಗಾಗಿ ದೆಹಲಿ ಪೊಲೀಸ್ ನ ಒಬ್ಬ ಡಿಸಿಪಿ ಶ್ರೇಣಿಯ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ.
“ಪ್ರಶಸ್ತಿ ಪುರಸ್ಕೃತರಲ್ಲಿ 22 ಮಹಿಳಾ ಅಧಿಕಾರಿಗಳು ಸೇರಿದ್ದಾರೆ. ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018 ರಲ್ಲಿ ಪದಕವನ್ನು ಸ್ಥಾಪಿಸಲಾಗಿದೆ. ಇದನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಘೋಷಿಸಲಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಶಸ್ತಿ ಪುರಸ್ಕೃತರಲ್ಲಿ ಉತ್ತರ ಪ್ರದೇಶದ 10 ಪೊಲೀಸರು, ಕೇರಳ ಮತ್ತು ರಾಜಸ್ಥಾನದಿಂದ ತಲಾ 9 ಮಂದಿ, ತಮಿಳುನಾಡಿನ 8, ಮಧ್ಯಪ್ರದೇಶದ 7 ಮತ್ತು ಗುಜರಾತ್‌ನಿಂದ 6 ಮಂದಿ ಪೊಲೀಸರು ಇದ್ದಾರೆ. ಉಳಿದ ಅಧಿಕಾರಿಗಳು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ.