ಮುಂಬೈ: ಮುಂಬೈ ದಾಳಿಯನ್ನ ಎಂದೆಂದಿಗೂ ಮರೆಯೋದಿಕ್ಕೆ ಸಾಧ್ಯವೇ ಇಲ್ಲ. ಘನ ಘೋರ ರೀತಿಯಲ್ಲಿ ಅನೇಕರ ಜೀವ ತೆಗೆದ ಉಗ್ರರ ಅಟ್ಟಹಾಸ ಎಂದೆಂದಿಗೂ ಮಾಸದ ಕಹಿನೆನಪು. ಈ ಮುಂಬೈ ಹೋಟೆಲ್ ದಾಳಿಗೆ 14 ವರ್ಷ. 2008ರಲ್ಲಿ ಸಂಭವಿಸಿದ್ದ ಮುಂಬೈ ಉಗ್ರರ ದಾಳಿ ಭಾರತೀಯ ಇತಿಹಾಸ ಪುಟದಲ್ಲಿ ಎಂದೆಂದಿಗೂ ಮರೆಯಲಾಗದ ಕಹಿ ಘಟನೆಯಾಗಿ ಉಳಿದಿದೆ.
ಹೌದು, 2008 ನವೆಂಬರ್ 26 ರ ರಾತ್ರಿ ನಡೆದ ಈ ದಾಳಿ ಅಕ್ಷರಶಃ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸುಮಾರು ನಾಲ್ಕು ದಿನಗಳ ಕಾಲ ಜನ ನರಕದಲ್ಲಿ ಬದುಕುವಂತೆ ಮಾಡಿದ್ದರು ಉಗ್ರರು. ಸುಮಾರು 160 ಅಮಾಯಕರ ಬಲಿ ಪಡೆದಿದ್ದ ಉಗ್ರರು, 18 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. 10 ಜನ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ನೋಡನೋಡುತ್ತಿದ್ದಂತೆಯೇ ರಕ್ತದೋಕುಳಿ ಮಾಡಿದ್ದರು.
ಈ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಲಾಗುತ್ತಿದ್ದು ಈ ವರ್ಷವೂ ಇದು ನಡೆಯಲಿದೆ. ಇದರಲ್ಲಿ ಹುತಾತ್ಮರಾದ ಪೊಲೀಸರ ಕುಟುಂಬದವರೂ ಭಾಗಿಯಾಗಲಿದ್ದಾರೆ. ಇನ್ನು ದಾಳಿಯ ವೇಳೆ ಕಸಬ್ ಎಂಬ ಉಗ್ರನನ್ನ ಜೀವಂತವಾಗಿ ಪೊಲೀಸರು ಸೆರೆ ಹಿಡಿದಿದ್ದರು.