ಲಾಹೋರ್: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಗೇಮ್ ನ ಗೀಳಿಗೆ ಯುವ ಪೀಳಿಗೆ ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಅನಾಹುತಗಳು ನಡೆದರೂ ಅದರಿಂದ ಮಾತ್ರ ಯುವ ಪೀಳಿಗೆ ಹೊರ ಬರುತ್ತಿಲ್ಲ. ಹೀಗೆ ಪಬ್ ಜಿ ಗೀಳಿಗೆ ಬಿದ್ದ ಬಾಲಕನೊಬ್ಬ ಬುದ್ಧಿವಾದ ಹೇಳಿದ್ದಕ್ಕೆ ತಾಯಿ ಹಾಗೂ ತನ್ನ ಒಡ ಹುಟ್ಟಿದವರಿಗೆ ಗುಂಡು ಹಾರಿಸಿದ್ದಾನೆ.
ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ತಾಯಿ ನಹಿದ್ ಮುಬಾರಕ್(45), ಮಗ ತೈಮೂರ್ ಹಾಗೂ ಇಬ್ಬರು ಹೆಣ್ಣು ಮಕ್ಕಳು ಗುಂಡಿಗೆ ಬಲಿಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ನಹಿದ್ ಮುಬಾರಕ್ ಪತಿಯನ್ನು ಕಳೆದುಕೊಂಡು, ಮಕ್ಕಳ ಆರೈಕೆಯಲ್ಲಿಯೇ ಜೀವನ ಸಾಗಿಸುತ್ತಿದ್ದರು. ಆದರೆ, ಇವರ ಮಗ 14 ವರ್ಷದ ಬಾಲಕ ಮಾತ್ರ ಆನ್ ಲೈನ್ ಗೇಮ್ ನಲ್ಲಿಯೇ ಹೆಚ್ಚಾಗಿ ಮಗ್ನನಾಗಿರುತ್ತಿದ್ದ. ಇದರಿಂದಾಗಿ ಬಾಲಕ ಮಾನಸಿಕ ವ್ಯಾಕುಲತೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದೆ.
ಈ ವಿಷಯವಾಗಿ ಬಾಲಕನಿಗೆ ಮನೆಯವರು ಬುದ್ಧಿ ಹೇಳಿದ್ದಾರೆ. ಇದರಿಂದಾಗಿ ಸಿಟ್ಟಾದ ಬಾಲಕ, ಮನೆಯಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ತಾಯಿ, ಸಹೋದರ ಹಾಗೂ ಸಹೋದರಿಯರ ಮೇಲೆ ಗುಂಡು ಹಾರಿಸಿದ್ದಾನೆ. ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪಕ್ಕದ ಮನೆಯವರು ಬೆಳಿಗ್ಗೆ ಗಮನಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಬಾಲಕನನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.