ಮಲೇಷಿಯಾ: ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿಯ ಜನಪ್ರಿಯತೆಯು ಪ್ರಪಂಚದಾದ್ಯಂತ ಗಗನಕ್ಕೇರಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಅನಿಯಂತ್ರಿತವಾಗಿದ್ದರೂ, ಇತರ ದೇಶಗಳಲ್ಲಿ ಇದು ಅದ್ಭುತ ಫಲಿತಾಂಶ ತೋರುತ್ತಿದೆ. ಇತ್ತೀಚೆಗೆ, 14 ವರ್ಷದ ಮಲೇಷಿಯಾದ ಹುಡುಗನೊಬ್ಬ ಬಿಟ್‌ಕಾಯಿನ್ ಗಳಿಕೆಯ ಮೂಲಕ ಮಿಲೇನಿಯರ್ ಆಗಿದ್ದೇನೆ ಎಂದು ಹೇಳಿಕೊಂಡು ಜಾಗತಿಕ ಸುದ್ದಿ ಮಾಡಿದ್ದಾನೆ.
ಟಿಕ್‌ಟಾಕ್‌ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಹಜಿಕ್ ನಸ್ರಿ, ವರ್ಷಗಳ ಹಿಂದೆ ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದಾಗಿನಿಂದ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಬಗ್ಗೆ ಹೇಳಿಕೊಳ್ಳುತ್ತಿದ್ದ. ಕ್ರಿಪ್ಟೋಕರೆನ್ಸಿ ಬಳಸಿ ಖರೀದಿಸಿದ ಕಾರುಗಳ ಭರ್ಜರಿ ಸಂಗ್ರಹವನ್ನು ಸಹ ತೋರಿಸಿದ್ದ. ಈತ ಟಿಕ್‌ಟಾಕ್ ವಿಡಿಯೋದಲ್ಲಿ ತನ್ನ ದುಬಾರಿ ಕಾರುಗಳನ್ನು ಪ್ರದರ್ಶಿಸಿದ್ದ.
2018ರಲ್ಲಿ 10 ನೇ ವಯಸ್ಸಿನಲ್ಲಿ ಬಾಲಕ ಖರೀದಿಸಿದ್ದ ಟೊಯೊಟಾ ಇದರಲ್ಲಿ ಇತ್ತು. ಕಪ್ಪು ರೇಂಜ್ ರೋವರ್ ಸ್ಪೋರ್ಟ್ ಕಾರನ್ನು 2020ರಲ್ಲಿ ಅಂದರೆ 12 ವರ್ಷದವನಿದ್ದಾಗ ಖರೀದಿ ಮಾಡಿದ್ದಾನೆ. ಇದರ ಜತೆ, ನೀಲಿ ಬಣ್ಣದ ಫೆರಾರಿ ಎಫ್‌ಎಫ್, ಐಕಾನಿಕ್ ಹಳದಿ ಲಂಬೋರ್ಘಿನಿ ಅವೆಂಟಡಾರ್ ಈತನ ಸಂಗ್ರಹಣೆಯಲ್ಲಿ ಸ್ಥಾನ ಪಡೆದಿದೆ.
ಡಿಜಿಟಲ್ ಕರೆನ್ಸಿಗಳ ಏರಿಕೆಯಿಂದ ಪ್ರಯೋಜನ ಪಡೆಯುವ ಯುವಜನರ ವಿಶೇಷ ಗುಂಪಿನಲ್ಲಿ ನಾಸ್ರಿ ಒಬ್ಬನು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಬಾಲಕನೀಗ ಜಾಲತಾಣದ ಹೀರೋ.