ಕೋವಿಡ್ 19 ಸೋಂಕನ್ನ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಆದೇಶವನ್ನ ಜೂನ್ 14ರವರೆಗೆ ವಿಸ್ತರಣೆ ಮಾಡಿದೆ. ಈ ಲಾಕ್ಡೌನ್ ಸಂದರ್ಭದಲ್ಲಿ ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಬನ್ನಿ. ಕೊರೊನಾ ತಡೆಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿ ಎಂದೆಲ್ಲ ಹೇಳುತ್ತಲೇ ಇದೆ.
ಅದೇ ರೀತಿ ಬೆಂಗಳೂರಿನ 14 ವರ್ಷದ ಬಾಲಕ ಕೂಡ ಕೊರೊನಾ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು ಇದಕ್ಕಾಗಿ ವಿಭಿನ್ನ ಮಾರ್ಗವನ್ನ ಕಂಡುಕೊಂಡಿದ್ದಾನೆ. ಇದಕ್ಕಾಗಿ ಹೊಸ ವೆಬ್ ಗೇಮ್ನ್ನು ಕಂಡು ಹಿಡಿದಿರುವ ಬಾಲಕ ಇದರಲ್ಲಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸಿದ್ದಾನೆ.
ಅಭಿನವ್ ರಂಜಿತ್ ದಾಸ್ ಎಂಬಾತ ʼಗೊ ಕೊರೊನಾ ಗೊʼ ಎಂಬ ಹೆಸರಿನ ವೆಬ್ ಗೇಮ್ನ್ನು ಕಂಡುಹಿಡಿದಿದ್ದಾನೆ. ಈ ಗೇಮಿನಲ್ಲಿ ಮೂರು ಸುತ್ತುಗಳಿದ್ದು ಇದರಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಪಿಪಿಇ ಕಿಟ್ಗಳನ್ನ ಧರಿಸಿ ವೈರಸ್ ವಿರುದ್ಧ ಹೋರಾಡಬೇಕು ಅಂತಿಮ ಸುತ್ತನ್ನ ಪೂರೈಸಿದ ಆಟಗಾರನಿಗೆ ರಿವಾರ್ಡ್ ರೂಪದಲ್ಲಿ ಕೊರೊನಾ ಲಸಿಕೆ ಲಭ್ಯವಾಗುವ ರೀತಿಯಲ್ಲಿ ಗೇಮ್ನ್ನು ವಿನ್ಯಾಸಗೊಳಿಸಿದ್ದಾನೆ.
ಪ್ರಸ್ತುತ ಜಗತ್ತಿನಲ್ಲಿರುವ ವಾಸ್ತವ ಪರಿಸ್ಥಿತಿ ನನಗೆ ಈ ರೀತಿ ಗೇಮ್ನ್ನು ವಿನ್ಯಾಸ ಮಾಡುವ ಐಡಿಯಾ ನೀಡಿತು. ಈ ಗೇಮ್ನಿಂದ ಟೈಮ್ ಪಾಸ್ ಆಗೋದು ಮಾತ್ರವಲ್ಲದೇ ಕೊರೊನಾ ವಿರುದ್ಧ ಯಾವ ರೀತಿಯಲ್ಲಿ ಹೋರಾಡಬೇಕು ಎಂಬ ಜಾಗೃತಿಯನ್ನೂ ಈ ಗೇಮ್ ಮೂಡಿಸಲಿದೆ ಎಂದು ಅಭಿನವ್ ಹೇಳಿದ್ದಾನೆ.