14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವನ್ನೆಸಗಿ ಕೊಲೆ ಮಾಡಿದ ದಾರುಣ ಘಟನೆಯು ಉತ್ತರ ದೆಹಲಿಯ ನರೇಲಾ ಪ್ರದೇಶದಲ್ಲಿ ಸಂಭವಿಸಿದೆ. ಶನಿವಾರದಂದು ಮುಚ್ಚಿದ ಅಂಗಡಿಯೊಂದರಲ್ಲಿ ಈ ಬಾಲಕಿಯ ಶವ ಪತ್ತೆಯಾಗಿತ್ತು.
ಈ ಪ್ರಕರಣ ಸಂಬಂಧ 107 ಮಂದಿಯ ವಿಚಾರಣೆಯನ್ನು ನಡೆಸಿದ್ದ ಪೊಲೀಸರು ಪ್ರಕರಣದ ತನಿಖೆಗೆಂದು ಏಳು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಬ್ರಿಜೇಂದ್ರ ಕುಮಾರ್ ಯಾದವ್ ಹೇಳಿದರು.
ಫೆಬ್ರವರಿ 12ರಂದು 14 ವರ್ಷದ ಬಾಲಕಿಯು ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಆಕೆಯ ಪೋಷಕರು ಹಾಗೂ ಸಹೋದರ ಹುಡುಕಾಟ ಆರಂಭಿಸಿದ್ದರು. ಮೂರು ದಿನ ಕಳೆದರೂ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಶನಿವಾರದಂದು ನರೇಲಾ ಕೈಗಾರಿಕಾ ಪ್ರದೇಶದ ಸನ್ನೋತ್ ಗ್ರಾಮದ ಅಂಗಡಿಯವರು ಪೊಲೀಸರಿಗೆ ಕರೆ ಮಾಡಿದ್ದರು. ಕೆಲವು ದಿನಗಳ ಬಳಿಕ ತಾನು ಝಾನ್ಸಿಯಿಂದ ಅಂಗಡಿಗೆ ಮರಳಿದ್ದು ತಮ್ಮ ಅಂಗಡಿಯಿಂದ ದುರ್ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದನು.
ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು. ಇಲ್ಲಿ ಭಾಗಶಃ ಕೊಳೆತು ಹೋಗಿದ್ದ ಬಾಲಕಿಯ ಶವವು ಪತ್ತೆಯಾಗಿತ್ತು. ಇದಾದ ಬಳಿಕ ಬಾಲಕಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.