ಮುಂಬೈ: ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ 132 ವರ್ಷಗಳಷ್ಟು ಹಳೆಯದಾದ ಸುರಂಗವೊಂದು ಪತ್ತೆಯಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಮುಂಬೈನ ಬೈಕುಲ್ಲಾದಲ್ಲಿರುವ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದ ಕಟ್ಟಡದ ಅಡಿಯಲ್ಲಿ ಈ ಸುರಂಗ ಪತ್ತೆಯಾಗಿದೆ.
ಕಟ್ಟಡ ಮೂಲತಃ ಸರ್ ದಿನ್ಶಾ ಮಾನೋಕ್ಜಿ ಪೆಟಿಟ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿದ್ದು ಅದನ್ನು ನಂತರ ನರ್ಸಿಂಗ್ ಕಾಲೇಜಾಗಿ ಪರಿವರ್ತಿಸಲಾಯಿತು.
ಸುರಂಗವು 4.5 ಅಡಿ ಎತ್ತರದಲ್ಲಿದೆ ಮತ್ತು ಹಲವಾರು ಇಟ್ಟಿಗೆ ಕಂಬಗಳನ್ನು ಹೊಂದಿದೆ ಮತ್ತು ಪ್ರವೇಶದ್ವಾರವನ್ನು ಕಲ್ಲಿನ ಗೋಡೆಯಿಂದ ಮುಚ್ಚಲಾಗಿದೆ ಎಂದು ವರದಿಯಾಗಿದೆ.
ನೀರು ಸೋರಿಕೆಯ ದೂರಿನ ನಂತರ ಪರಿಶೀಲನೆ ಮಾಡಿದಾಗ ಇದು ಬೆಳಕಿಗೆ ಬಂದಿದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಮತ್ತು ಭದ್ರತಾ ಸಿಬ್ಬಂದಿ ಕಟ್ಟಡವನ್ನು ಸರ್ವೆ ಮಾಡಿದ ಸಂದರ್ಭದಲ್ಲಿ 132 ವರ್ಷಗಳಷ್ಟು ಹಳೆಯದಾದ ಸುರಂಗ ಪತ್ತೆಯಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್ ರಾಥೋಡ್ ಹೇಳಿದ್ದಾರೆ.
200 ಮೀಟರ್ ಉದ್ದದ ರಚನೆಯು ಕಟ್ಟಡದ ಅಡಿಯಲ್ಲಿ ಕಂಡುಬಂದಿದೆ. ಸುರಂಗ ಪತ್ತೆಯಾದ ಕೂಡಲೇ, ಕಟ್ಟಡವು ಪಾರಂಪರಿಕ ರಚನೆಯಾಗಿರುವುದರಿಂದ ಆವಿಷ್ಕಾರದ ಬಗ್ಗೆ ಅಧಿಕಾರಿಗಳು ಮುಂಬೈ ಕಲೆಕ್ಟರ್ ಮತ್ತು ಮಹಾರಾಷ್ಟ್ರ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ.