ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ಪರಿಣಾಮ ಈವರೆಗೆ 135 ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಮಂದಿ ಕಾಣೆಯಾಗಿದ್ದು ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.
ಸೇತುವೆ ಶಿಥಿಲಗೊಂಡಿದ್ದ ಕಾರಣ ಇದನ್ನು ಆರು ತಿಂಗಳುಗಳ ಕಾಲ ಬಂದ್ ಮಾಡಿ ನವೀಕರಣ ಕಾರ್ಯ ಕೈಗೊಳ್ಳಲಾಗಿತ್ತು. ನಾಲ್ಕು ದಿನಗಳ ಹಿಂದಷ್ಟೇ ಈ ತೂಗು ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತ ಮಾಡಲಾಗಿತ್ತು. ಇದೀಗ ಘೋರ ದುರಂತ ನಡೆದು ಹೋಗಿದೆ.
ಭಾನುವಾರ ರಜಾದಿನವಾಗಿದ್ದ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಕೆಲ ಯುವಕರು ತೂಗುಸೇತುವೆಯನ್ನು ಅಲ್ಲಾಡಿಸಿದ್ದು, ಹಗ್ಗದ ಸಹಾಯವಿಲ್ಲದೆ ಸಾರ್ವಜನಿಕರು ಅದರ ಮೇಲೆ ನಿಲ್ಲುವುದು ಸಹ ಕಷ್ಟವಾಗಿತ್ತು ಎನ್ನಲಾಗಿದೆ.
ಸಾರ್ವಜನಿಕರ ಎಚ್ಚರಿಕೆಯನ್ನೂ ಲೆಕ್ಕಿಸದೆ ಈ ಯುವಕರು ಸೇತುವೆ ಮೇಲೆ ಕುಣಿದು ಕುಪ್ಪಳಿಸಿದ್ದು, ಜೊತೆಗೆ ಉಯ್ಯಾಲೆಯಂತೆ ತೂಗಲು ಅಲ್ಲಾಡಿಸಿದ್ದಾರೆ. ಇದರ ಪರಿಣಾಮ ತೂಗು ಸೇತುವೆ ಕುಸಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಯುವಕರು ಪುಂಡಾಟ ಮೆರೆಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.