ಭೋಪಾಲ್: 13 ವರ್ಷದ ಬಾಲಕನೊಬ್ಬ ಡಿಜೆ ಸೌಂಡ್ ಗೆ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
13 ವರ್ಷದ ಸಮರ್ ಮೃತ ಬಾಲಕ. ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆ ಡಿಜೆ ಸೌಂಡ್ ಹಾಗೂ ಕಲಾತಂಡಗಳ ನೃತ್ಯದೊಂದಿಗೆ ಬಾಲಕನ ಮನೆಯ ಮುಂದೆ ಸಾಗಿತ್ತು. ಈ ವೇಳೆ ಮನೆಯಿಂದ ಹೊರ ಬಂದ ಬಾಲಕ ಕಿವಿಗಡಚಿಕ್ಕುವ ಡಿಜೆ ಸೌಂಡ್ ಗೆ ತಾನೂ ಹೆಜ್ಜೆ ಹಾಕಲು ಆರಂಭಿಸಿದ್ದಾನೆ. ಡಾನ್ಸ್ ಮಾಡುತ್ತಲೇ ಏಕಾಏಕಿ ಕುಸಿದುಬಿದ್ದ ಬಾಲಕ ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವನ್ನಪ್ಪಿದ್ದಾನೆ.
ಮೆರವಣಿಗೆಯಲ್ಲಿ ಸಾಗಿದ್ದ ಜನರು ಬಾಲಕ ಸಮರ್ ಕುಸಿದು ಬಿದ್ದುದನ್ನು ಗಮನಿಸದೇ ಡಿಜೆ ಸೌಂಡ್ ಗೆ ಡಾನ್ಸ್ ಮಾಡುತ್ತಲೇ ಇದ್ದರು. ಈ ವೇಳೆ ಬಾಲಕನ ತಾಯಿ ತನ್ನ ಮಗ ಕೆಳಗೆ ಬಿದ್ದಿರುವುದನ್ನು ಗಮನಿಸಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕ ಅಷ್ಟರಲ್ಲೇ ಉಸಿರು ಚಲ್ಲಿದ್ದಾನೆ. ಕಾರ್ಡಿಯಾಕ್ ಅರೆಸ್ಟ್ ನಿಂದ ಬಾಲಕ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಬಾಲಕನ ತಾಯಿ ಹೇಳುವ ಪ್ರಕಾರ ಬಾಲಕನಿಗೆ ಸ್ವಲ್ಪ ಹೃದಯ ಸಂಬಂಧಿ ಸಮಸ್ಯೆಯಿತ್ತಾದರೂ ಆತ ಆರೋಗ್ಯವಾಗಿಯೇ ಇದ್ದ. ಆದರೆ ಬಾಲಕನ ತಂದೆ ಹೇಳುವ ಪ್ರಕಾರ ಭಾರಿ ಸದ್ದು-ಗದ್ದಲ, ಡಿಜೆ ಸೌಂಡ್ ನೊಂದಿಗೆ ಮೆರವಣಿಗೆ ಸಾಗಿತ್ತು, ಹಲವು ಬಾರಿ ಡಿಜೆ ಸೌಂಡ್ ಕಡಿಮೆ ಮಾಡುವಂತೆ ಕೇಳಿಕೊಂಡರೂ ಮೆರವಣಿಗೆ ಆಯೋಜಕರು ಸೌಂಡ್ ಕಡಿಮೆ ಮಾಡಿಲ್ಲ. ಕಿವಿಗಡಚಿಕ್ಕುವ ಡಿಜೆ ಸೌಂಡ್ ಗೆ ಆಘಾತಕ್ಕೊಳಗಾಗಿ ತನ್ನ ಮಗ ಕೊನೆಯುಸಿರೆಳೆದಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿ 19 ವರ್ಷದ ಯುವಕನೊಬ್ಬ ಮದುವೆ ಕಾರ್ಯಕ್ರಮದಲ್ಲಿ ಹಾಕಿದ್ದ ಡಿಜೆ ಸೌಂಡ್ ನಿಂದ ಸಾವನ್ನಪ್ಪಿದ್ದ.