ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ 300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರೀತರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಅನೇಕರು ಮುಂದಾಗಿದ್ದಾರೆ. ಈ ಮಧ್ಯೆ ತಮಿಳುನಾಡಿನ 13 ವರ್ಷದ ಹರಿಣಿ ಶ್ರೀ ಎಂಬ ಬಾಲಕಿ ಎಲ್ಲರ ಗಮನ ಸೆಳೆದಿದ್ದಾರೆ. ಮೂರು ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶಿಸಿ, ಬಂದ ಹಣವನ್ನು ನಿರಾಶ್ರೀತರಿಗೆ ನೀಡಿದ್ದಾಳೆ.
ಗುರುವಾರ ಹರಿಣಿ , 15,000 ರೂಪಾಯಿಯನ್ನು ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ನೀಡಿದ್ದಾಳೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಾಲಕಿಯನ್ನು ಭೇಟಿಯಾಗಿ, ಆಕೆ ಕೆಲಸವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಹರಿಣಿ ಭರತನಾಟ್ಯವನ್ನು ಫೋನ್ ನಲ್ಲಿ ವೀಕ್ಷಣೆ ಮಾಡಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರದ ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷ್ಯವನ್ನು ಹಂಚಿಕೊಂಡಿದೆ. ತಮಿಳುನಾಡಿನ 13 ವರ್ಷದ ಬಾಲಕಿ ಹರಿಣಿ ಶ್ರೀ, ವಯನಾಡ್ ಭೂಕುಸಿತ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಲು ಸತತ 3 ಗಂಟೆಗಳ ಕಾಲ ಭರತನಾಟ್ಯವನ್ನು ಪ್ರದರ್ಶಿಸಿದರು. ಅವರು 15,000 ರೂಪಾಯಿಯನ್ನು ದೇಣಿಗೆ ನೀಡಿದರು ಎಂದು ಮಾಹಿತಿ ನೀಡಿದೆ.
ಕಳೆದ ತಿಂಗಳು ಸಂಭವಿಸಿದ ಭೀಕರ ಭೂಕುಸಿತದಲ್ಲಿ ಬದುಕುಳಿದವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಕೇರಳದ ವಯನಾಡ್‌ಗೆ ಭೇಟಿ ನೀಡಲಿದ್ದಾರೆ.