ಕೋವಿಡ್-19ನ ಎರಡನೇ ಅಲೆಯು ದೇಶಾದ್ಯಂತ ಸಾವಿರಾರು ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದೆ. ತಮ್ಮ ಹೆತ್ತವರನ್ನು ಈ ಸೋಂಕಿಗೆ ಕಳೆದುಕೊಳ್ಳುತ್ತಿರುವ ಅನೇಕ ಮಕ್ಕಳ ಪಾಡು ಹೇಳತೀರದಾಗಿದೆ. ಇಂಥದ್ದೇ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಒಡಹುಟ್ಟಿದ ಮೂವರು ಮಕ್ಕಳು ತಮ್ಮ ಹೆತ್ತವರನ್ನು ಈ ಸೋಂಕಿಗೆ ಕಳೆದುಕೊಂಡಿದ್ದಾರೆ.
ಇಲ್ಲಿನ ಲಿಸಾಡ್ ಗ್ರಾಮದ ಸಮರ್ಪ್ರೀತ್ (13), ಮೀನಾ (12) ಹಾಗೂ ಶಂಕರ್ (11) ಎಂಬ ಮಕ್ಕಳು ಇದ್ದಕ್ಕಿದ್ದಂತೆಯೇ ಅನಾಥರಾಗಿಬಿಟ್ಟಿದ್ದಾರೆ. ಒಂದೇ ವರ್ಷದಲ್ಲಿ ಈ ಮಕ್ಕಳು ತಮ್ಮ ತಂದೆ, ತಾಯಿ ಹಾಗೂ ಅಜ್ಜ-ಅಜ್ಜಿಯರನ್ನು ಕಳೆದುಕೊಂಡಿದ್ದಾರೆ.
ಇಂಥ ಪರಿಸ್ಥಿತಿಯಲ್ಲೂ ಕೆಚ್ಚೆದೆ ತೋರಿದ ಸಮರ್ಪ್ರೀತ್ ತನ್ನ ಒಡಹುಟ್ಟಿದವರನ್ನು ತಾನೇ ಸಾಕಿ ಸಲಹುವುದಾಗಿ ಶಪಥಗೈದಿದ್ದಾನೆ.
“ಘೋರ ದುರಂತವೊಂದು ನಮ್ಮ ಮೇಲೆ ಆವರಿಸಿದೆ. ಆದರೆ ನಾವು ಇದನ್ನು ಜೊತೆಯಾಗಿ ಎದುರಿಸುತ್ತಿದ್ದೇವೆ. ನನ್ನ ಒಡಹುಟ್ಟಿದವರ ಶಿಕ್ಷಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ನಾನು ನನ್ನ ಕೈಲಾದ ಪ್ರಯತ್ನ ಮಾಡುವೆ. ಪರಿಶ್ರಮ ಪಟ್ಟು ನಾನು ಅವರನ್ನು ನೋಡಿಕೊಳ್ಳುವೆ” ಎಂದು ಸಮರ್ಪ್ರೀತ್ ತನ್ನ 13ನೇ ವಯಸ್ಸಿನಲ್ಲೇ ಎಲ್ಲರ ಹುಬ್ಬೇರುವ ಮಟ್ಟದಲ್ಲಿ ದಿಟ್ಟತನ ತೋರಿದ್ದಾನೆ.
ಈ ಮಕ್ಕಳ ಸಂಬಂಧಿಗಳೆಲ್ಲಾ ಒಮ್ಮೆಲೇ ತೀರಿಕೊಂಡಿದ್ದು, ಇವರನ್ನು ದೊಡ್ಡವರಾಗುವವರೆಗೂ ಸಾಕಿ ಸಲಹಲು ವ್ಯವಸ್ಥೆ ಮಾಡಲು ನಾವು ಮನವಿ ಮಾಡುತ್ತೇವೆ ಎಂದು ಗ್ರಾಮಸ್ಥರೆಲ್ಲಾ ಸರ್ಕಾರಕ್ಕೆ ಕೋರಿಕೊಂಡಿದ್ದಾರೆ.