
ಚೆನ್ನೈ: ಕಾಲೇಜು ಕಾಂಪಸ್ ನಲ್ಲಿ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ 13 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಘಟನೆ ನಡೆದಿದೆ.
ತಮಿಳುನಾಡಿನ ಕೊಯಮತ್ತೂರಿನ ಕಾಲೇಜೊಂದರಲ್ಲಿ ಕ್ಯಾಂಪಸ್ ನಲ್ಲಿ ನಡೆದ ಕಳ್ಳತನ ಪ್ರಕರಣ ವಿಚಾರವಾಗಿ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಸ್ಥೆಯ ಉಪಮುಖ್ಯ ವಾರ್ಡನ್ ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು.
ಪ್ರಕರಣ ಸಂಬಂಧ ಹಲ್ಲೆ ನಡೆಸಿದ 13 ಪದವಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಘಟನೆ ಬಗ್ಗೆ ತನಿಖೆಗೆ ವಾರ್ಡನ್ ಹಾಗೂ ಪ್ರಾಂಶುಪಾಲರು ಸಮಿತಿ ರಚನೆ ಮಾಡಿದ್ದಾರೆ.