ಹಾಸನ : 12 ದಿನಗಳ ಕಾಲ ನಡೆದಿದ್ದ ಶಕ್ತಿದೇವತೆ ಹಾಸನಾಂಬೆ ದರ್ಶನ ಅವಕಾಶಕ್ಕೆ ಇಂದು ಮಧ್ಯಾಹ್ನ ವಿದ್ಯುಕ್ತ ತೆರೆ ಬಿದ್ದಿದೆ.
ಕಳೆದ 12 ದಿನಗಳಿಂದ ಅಪಾರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಿ, ಆಶೀರ್ವಾದ ಪಡೆದರು. ಕಳೆದ 12 ದಿನಗಳಲ್ಲಿ 13 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು 5.80 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಲಾಗಿದೆ. ಶಕ್ತಿ ಯೋಜನೆ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಿಯ ದರ್ಶನ ಪಡೆದರು.
ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಸಲ್ಲಿಸಲ್ಲಿಸಿದ ಬಳಿಕ ಮಧ್ಯಾಹ್ನ 12:23ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸಮ್ಮುಖದಲ್ಲಿ ಹಾಸನಾಂಬೆ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಯಿತು. ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸುವ ಮೂಲಕ ಬೀಗ ಹಾಕಲಾಯಿತು. ಸಾರ್ವಜನಿಕ ದರ್ಶನದ ಕೊನೆಯ ದಿನವಾದ ಮಂಗಳವಾರ ಹಲವು ಶಾಸಕರು, ಮಾಜಿ ಸಚಿವರುಗಳು ಹಾಗೂ ಅಧಿಕಾರಿಗಳು ದೇವಿ ದರ್ಶನ ಪಡೆದರು.