ಕಳೆದ 13 ವರ್ಷಗಳಿಂದ ನವದೆಹಲಿಯಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನ ನಡೆದುಕೊಂಡು ಬಂದಿದ್ದು, ಆದರೆ ಇದೇ ಮೊದಲ ಬಾರಿಗೆ ಈ ವರ್ಷದ ಪರೇಡ್ ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತವಾಗುವಂತಾಗಿದೆ.
ಅವಕಾಶ ವಂಚಿತ ಇತರೆ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ರಕ್ಷಣಾ ಇಲಾಖೆ ಅಡಿ ಕಾರ್ಯ ನಿರ್ವಹಿಸುವ ಸ್ತಬ್ಧ ಚಿತ್ರ ಆಯ್ಕೆ ಸಮಿತಿ ಈ ತೀರ್ಮಾನವನ್ನು ಕೈಗೊಂಡಿದ್ದು, ಹೀಗಾಗಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಿ ಶಕ್ತಿ ಸ್ತಬ್ಧ ಚಿತ್ರ ಪ್ರದರ್ಶನ ಮಾಡಬೇಕೆಂಬ ಕರ್ನಾಟಕದ ಯೋಜನೆಗೆ ಹಿನ್ನಡೆಯಾಗಿದೆ.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅರುಣಾಚಲ ಪ್ರದೇಶ, ಅಸ್ಸಾಂ, ಚಂಡೀಗಢ, ಡಿಯೋ ದಾಮನ್, ಗುಜರಾತ್, ಜಮ್ಮು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ತ್ರಿಪುರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಆಯ್ಕೆಯಾಗಿವೆ.