ಬೆಂಗಳೂರು: ಸಾವಿರಾರು ಶಿಕ್ಷಕರು ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ಗೈರು ಹಾಜರಾದ ಕಾರಣ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಕೆಎಸ್‌ಇಇಬಿ) ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಸಮಯಕ್ಕೆ ಸರಿಯಾಗಿ ಸಂಪೂರ್ಣಗೊಳಿಸಲು ಹೆಣಗಾಡಬೇಕಾಯಿತು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಒಟ್ಟು 63 ಸಾವಿರ ಶಿಕ್ಷಕರನ್ನು ನಿಯೋಜಿಸಿತ್ತು. ಆದರೆ ಪ್ರಥಮ ಭಾಷೆ ಇಂಗ್ಲೀಷ್ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಸುಮಾರು 12 ಸಾವಿರ ಶಿಕ್ಷಕರು ಗೈರಾಗಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆದಿತ್ತು. ಮೌಲ್ಯಮಾಪನವು ಏಪ್ರಿಲ್ 21 ಮತ್ತು ಮೇ 4ರವರೆಗೆ ನಡೆದಿದ್ದು, ಶಿಕ್ಷಕರ ಗೈರಾದ ಕಾರಣ ನಾಲ್ಕು ದಿನಗಳ ಕಾಲ ತಡವಾಗಿದೆ. ಇದರಿಂದ ಫಲಿತಾಂಶವು ಸಹ ತಡವಾಗಿದ್ದು, ಈ ಹಿಂದೆ ಮೇ 15ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಿದ್ದ ಅಧಿಕಾರಿಗಳು ಮೇ 19 ರ ಸುಮಾರಿಗೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಶಿಕ್ಷಕರ ಗೈರನ್ನು ಗಂಭೀರವಾಗಿ ಪರಿಗಣಿಸಿರುವ ಪರೀಕ್ಷಾ ಮಂಡಳಿ, ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ. ಅಲ್ಲದೇ ಗೈರು ಹಾಜರಾಗಲು ಸಕಾರಣವನ್ನು ಕೇಳಿದೆ. ಇದರ ಆಧಾರದ ಮೇಲೆ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಮಂಡಳಿ ನಿರ್ಧರಿಸಿದೆ. ಆರೋಗ್ಯ, ಕೌಟುಂಬಿಕ ಸಮಸ್ಯೆ, ಸಮಾರಂಭ ಹೀಗೆ ನಿಜವಾದ ಕಾರಣ ತಿಳಿಸಿದರೆ ಮಾತ್ರ ಶಿಕ್ಷೆಯಿಂದ ವಿನಾಯತಿ ನೀಡಲಾಗುತ್ತದೆ. ಯಾವುದೇ ಕಾರಣ ಇಲ್ಲದೇ ಸುಖಾಸುಮ್ಮನೆ ಗೈರು ಹಾಜರಾಗಿದ್ದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಒಟ್ಟಿನಲ್ಲಿ ಶಿಕ್ಷಕರು ನೀಡುವ ಕಾರಣದ ಆಧಾರದ ಮೇಲೆ ದಂಡವನ್ನು ನಿಶ್ಚಯಿಸಲಾಗುತ್ತದೆ ಎಂದು KSEEB ಅಧಿಕಾರಿಗಳು ತಿಳಿಸಿದ್ದಾರೆ.