ಚಿತ್ರದುರ್ಗ: ಹೈ ಡೋಸ್ ಇಂಜಕ್ಷನ್ ಗೆ ಬಾಲಕಿಯೊರ್ವಳು ಬಲಿಯಾಗಿದ್ದು, ಚಿತ್ರದುರ್ಗ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಪುತ್ರ ವೈದ್ಯಾಧಿಕಾರಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
12 ವರ್ಷದ ಕೃಪಾ ಎಸ್ ಮೃತ ಬಾಲಕಿ. ಮಾಳಪ್ಪನಹಳ್ಳಿ ಗೇಟ್ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಾಲಕಿ ಓದುತ್ತಿದ್ದಳು. ಕೆಮ್ಮಿನಿಂದ ಬಳಲುತ್ತಿದ್ದ ಬಾಲಕಿಯನ್ನು ಗುಡ್ಡದ ನೇರಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ವೈದ್ಯ ಶಶಿಕಿರಣ್ ಇಂಜಕ್ಷನ್ ನೀಡುತ್ತಿದ್ದಂತೆ ಬಾಲಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಬಾಲಕಿಯನ್ನು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಬಾಲಕಿ ಸಾವನ್ನಪ್ಪಿದ್ದು, ವೈದ್ಯರು ನೀಡಿದ ಹೈ ಡೋಸ್ ಇಂಜಕ್ಷನ್ ನಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಶಿಕಿರಣ್ ನಿರ್ಲಕ್ಷ್ಯದಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಜಿ.ಎನ್.ಮಲ್ಲಿಕಾರ್ಜುನ ಪುತ್ರ ಡಾ. ಶಶಿ ಕಿರಣ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.