ಅಮೆರಿಕದ ಮೆಂಫಿಸ್ ನಗರದ 12 ವರ್ಷದ ಬಾಲಕನೊಬ್ಬ ತನ್ನ ಮಲಗುವ ಕೋಣೆಯಲ್ಲೇ ಅಣು ಸಮ್ಮಿಳನ ರಿಯಾಕ್ಟರ್ ನಿರ್ಮಿಸಿ ಎಲ್ಲರನ್ನೂ ಬೆರಗಾಗಿಸಿದ್ದಾನೆ. ಈತನ ಸಾಧನೆ ಗಿನ್ನೆಸ್ ದಾಖಲೆ ಸೇರಿದೆ, ಆದರೆ ಎಫ್‌ಬಿಐ ಅಧಿಕಾರಿಗಳು ಈತನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಾಕ್ಸನ್ ಓಸ್ವಾಲ್ಟ್ ಎಂಬ ಈ ಬಾಲಕ 13ನೇ ವಯಸ್ಸಿಗೆ ಕಾಲಿಡುವ ಮುನ್ನವೇ ಈ ಸಾಧನೆ ಮಾಡಿದ್ದಾನೆ. 2008ರಲ್ಲಿ 14ನೇ ವಯಸ್ಸಿನಲ್ಲಿ ಅಣು ಸಮ್ಮಿಳನ ಸಾಧನೆ ಮಾಡಿದ ಟೇಲರ್ ವಿಲ್ಸನ್ ಅವರ ಟೆಡ್ ಟಾಕ್‌ನಿಂದ ಪ್ರೇರಿತನಾಗಿ ಈ ಸಾಧನೆ ಮಾಡಿದ್ದೇನೆ ಎಂದು ಜಾಕ್ಸನ್ ತಿಳಿಸಿದ್ದಾನೆ.
ಅಣು ಸಮ್ಮಿಳನ ರಿಯಾಕ್ಟರ್ ನಿರ್ಮಿಸಲು ಬೇಕಾದ ಪರಿಕರಗಳನ್ನು ಇ-ಬೇಯಿಂದ ತರಿಸಿಕೊಂಡಿದ್ದಾನೆ. ಒಂದು ವರ್ಷದ ಶ್ರಮದ ನಂತರ ರಿಯಾಕ್ಟರ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. 13ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಮೊದಲು ಯಶಸ್ವಿಯಾಗಿ ಅಣು ಸಮ್ಮಿಳನ ಸಾಧಿಸಿದ್ದಾನೆ.
ಈ ಸಾಧನೆಯ ನಂತರ ಜಾಕ್ಸನ್ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದಾನೆ. ಅಲ್ಲದೇ, ಎಫ್‌ಬಿಐ ಅಧಿಕಾರಿಗಳು ಆತನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್, ಜಾಕ್ಸನ್ ಯಾವುದೇ ತೊಂದರೆಗೆ ಸಿಲುಕಿಲ್ಲ ಎಂದು ಆತ ತಿಳಿಸಿದ್ದಾನೆ.