ಕೊರೊನಾ ವೈರಸ್‌ನ ಹೊಸ ರೂಪಾಂತರ ಒಮಿಕ್ರಾನ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಇದುವರೆಗೆ ಭಾರತ ಸೇರಿದಂತೆ 25 ಕ್ಕೂ ಹೆಚ್ಚು ದೇಶಗಳಲ್ಲಿ ಇದು ದೃಢಪಟ್ಟಿದೆ. ಈಗಾಗಲೇ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಈಗ ದೆಹಲಿ ತಲುಪಿದೆ. ಒಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾಗಿರುವ ಶಂಕಿತ 12 ರೋಗಿಗಳನ್ನು ಇದುವರೆಗೆ ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಕೊರೊನಾ ವೈರಸ್ ಒಮಿಕ್ರಾನ್ ರೂಪಾಂತರದ 8 ಶಂಕಿತರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ನಾಲ್ವರು ಶಂಕಿತರನ್ನು ದಾಖಲಿಸಲಾಗಿದೆ. ಇಬ್ಬರ ಕೋವಿಡ್ -19 ಪರೀಕ್ಷಾ ವರದಿ ಧನಾತ್ಮಕವಾಗಿದೆ. ಇತರ ಇಬ್ಬರ ವರದಿಗೆ ಕಾಯಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿದೆ. ಎಲ್ಲಾ ರೋಗಿಗಳ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ.
ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿರುವ 4 ಶಂಕಿತರ ಪೈಕಿ ಇಬ್ಬರು ಬ್ರಿಟನ್‌ನಿಂದ ಮರಳಿದ್ದರೆ, ಒಬ್ಬರು ಫ್ರಾನ್ಸ್ ನಿಂದ ಮತ್ತು ಒಬ್ಬರು ನೆದರ್‌ಲ್ಯಾಂಡ್‌ನಿಂದ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಂಕಿತ ರೋಗಿಗಳ ಸಂಪರ್ಕದಲ್ಲಿರುವವರನ್ನು ಪತ್ತೆ ಮಾಡಿ, ಎಚ್ಚರಿಕೆ ತೆಗೆದುಕೊಳ್ಳಲಾಗ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯ, ಭಾರತದಲ್ಲಿ ಒಮಿಕ್ರಾನ್ ರೂಪಾಂತರ ಪತ್ತೆಯಾಗಿದೆ ಎಂದು ಗುರುವಾರ ದೃಢಪಡಿಸಿದೆ. ಕರ್ನಾಟಕದಲ್ಲಿ ಎರಡು ಹೊಸ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದೆ. ಸೋಂಕಿತ ಒಬ್ಬ ವ್ಯಕ್ತಿ ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದು, ಇನ್ನೊಬ್ಬ ವ್ಯಕ್ತಿ ವೈದ್ಯರಾಗಿದ್ದು, ಯಾವುದೇ ಪ್ರವಾಸದ ಹಿನ್ನೆಲೆ ಹೊಂದಿಲ್ಲ ಎನ್ನಲಾಗಿದೆ.