ಹೈದರಾಬಾದ್: 12 ಭಾರತೀಯ ಯುವಕರನ್ನು ವಂಚಿಸಿದ ಏಜೆಂಟರು ರಷ್ಯಾ ಪರವಾಗಿ ಯುದ್ಧದಲ್ಲಿ ಹೋರಾಡಲು ಕಳುಹಿಸಿದ್ದಾರೆ. ಸಿಕ್ಕಿಬಿದ್ದಿರುವ ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿಸಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಹೈದರಾಬಾದ್ ಸಂಸದ ಓವೈಸಿ ಮನವಿ ಮಾಡಿದ್ದಾರೆ.
ಈ ಕುರಿತಾಗಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ವಿನಂತಿಸಿರುವ ಅಸಾದುದ್ದೀನ್ ಓವೈಸಿ, ತೆಲಂಗಾಣ, ಕರ್ನಾಟಕ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ ಯುವಕರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಕರೆದೊಯ್ಯಲಾಗಿತ್ತು ಎಂದು ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಹನ್ನೆರಡು ಯುವಕರನ್ನು ಏಜೆಂಟರು ವಂಚಿಸಿದ್ದಾರೆ. ಉದ್ಯೋಗದ ಭರವಸೆಯ ಮೇಲೆ ರಷ್ಯಾಕ್ಕೆ ಕರೆದೊಯ್ದರು. ಅವರಿಗೆ(ನಿರುದ್ಯೋಗಿ ಯುವಕರಿಗೆ) ಕಟ್ಟಡದ ಭದ್ರತಾ ಕೆಲಸಗಳನ್ನು ನೀಡಲಾಗುವುದು ಎಂದು ಏಜೆಂಟ್‌ಗಳು ಹೇಳಿದ್ದರು. ಆದರೆ, ಅವರನ್ನು ವಂಚಿಸಿದ ನಂತರ ಅವರನ್ನು ರಷ್ಯಾ-ಉಕ್ರೇನ್‌ನಲ್ಲಿ ಯುದ್ಧದ ಸ್ಥಳಕ್ಕೆ ಕರೆದೊಯ್ಯಲಾಯಿತು. ಸಂತ್ರಸ್ತರ ಕುಟುಂಬ ಸದಸ್ಯರು ತಮ್ಮನ್ನು ಭೇಟಿಯಾಗಿ ಸಹಾಯ ಕೋರಿದ್ದಾರೆ ಎಂದು ಹೇಳಿದ್ದಾರೆ.
ಮೂವರು ಏಜೆಂಟರು ದುಬೈನಲ್ಲಿದ್ದು, ಇಬ್ಬರು ಮುಂಬೈನಿಂದ ಯುವಕರನ್ನು ವಂಚಿಸಿ ಯುದ್ಧರಂಗಕ್ಕೆ ಕಳುಹಿಸಿದ್ದಾರೆ. ಇದೊಂದು ದೊಡ್ಡ ರಾಕೆಟ್ ಮತ್ತು ಏಜೆಂಟರು ನಿರುದ್ಯೋಗಿ ಯುವಕರನ್ನು ಹೀಗೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಓವೈಸಿ, ಯುವಕರು ಉದ್ಯೋಗದ ಉದ್ದೇಶಕ್ಕಾಗಿ ರಷ್ಯಾಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ, ಆದರೆ ಅವರು ಭಾರತೀಯ ಏಜೆಂಟರಿಂದ ದಾರಿತಪ್ಪಿ ರಷ್ಯಾದ ಸೈನ್ಯಕ್ಕೆ ಸೇರಿದ್ದಾರೆ, ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರ ಕುಟುಂಬಗಳು ಆತಂಕಕ್ಕೆ ಒಳಗಾಗಿದ್ದು, ಯುವಕರನ್ನು ಸುರಕ್ಷಿತವಾಗಿ ಕರೆತರಬೇಕೆಂದು ಕೋರಿದ್ದಾರೆ.