ಭುಜ್: ಭಾರೀ ಮಳೆಯಿಂದ ಜರ್ಜರಿತವಾಗಿರುವ ಗುಜರಾತ್‌ನ ಕಛ್ ಜಿಲ್ಲೆಯ ಲಖ್‌ಪತ್ ತಾಲೂಕಿನಲ್ಲಿ 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ, ಸಾವಿಗೆ ಪ್ರಾಥಮಿಕವಾಗಿ ನ್ಯುಮೋನಿಟಿಸ್ ಕಾರಣ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಆದರೆ, ಜ್ವರವನ್ನು ನಿಖರವಾಗಿ ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗಿಲ್ಲ, ಇದರಿಂದ ಉಸಿರಾಟಕ್ಕೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಕೆಲವು ಜಿಲ್ಲಾ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.
ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ತಾಲೂಕಿನಲ್ಲಿ ವೈದ್ಯಕೀಯ ಸೇವೆಗಳನ್ನು ತೀವ್ರಗೊಳಿಸಲಾಗಿದ್ದು, ಹೆಚ್1ಎನ್1, ಹಂದಿಜ್ವರ, ಕ್ರಿಮಿಯನ್-ಕಾಂಗೊ ಜ್ವರ, ಮಲೇರಿಯಾ ಮತ್ತು ಡೆಂಗ್ಯೂ ಸಾಧ್ಯತೆಯನ್ನು ನಿಯಂತ್ರಿಸಲು 22 ಕಣ್ಗಾವಲು ತಂಡಗಳು, ವೈದ್ಯರನ್ನು ನಿಯೋಜಿಸಿ ನಿವಾಸಿಗಳಿಂದ ಮಾದರಿಗಳನ್ನು ಪಡೆಯಲಾಗಿದೆ ಎಂದು ಕಛ್ ಕಲೆಕ್ಟರ್ ಅಮಿತ್ ಅರೋರಾ ಹೇಳಿದ್ದಾರೆ.
ಪ್ರಾಥಮಿಕವಾಗಿ, ಸಾವುಗಳು ನ್ಯುಮೋನಿಟಿಸ್‌ನಿಂದ ಉಂಟಾಗಿವೆ ಎಂದು ತೋರುತ್ತದೆ. ಇದು ಮಾಲಿನ್ಯದಿಂದ ಕಾಣಿಸಿಕೊಂಡಿಲ್ಲ ಅಥವಾ ಸಾಂಕ್ರಾಮಿಕ ರೋಗದಂತೆ ತೋರುತ್ತಿಲ್ಲ. ಪೀಡಿತ ಪ್ರದೇಶಗಳಲ್ಲಿ 22 ಆರೋಗ್ಯ ಇಲಾಖೆ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಕಚ್ ಜಿಲ್ಲಾ ಪಂಚಾಯತ್ ಸದಸ್ಯೆ ಮೀನಾಬಾ ಜಡೇಜಾ ಅವರು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿಸಿಂಗ್ ಗೋಹಿಲ್ ಅವರಿಗೆ ಪತ್ರ ಬರೆದಿದ್ದು, ಲಖ್ಪತ್ ತಾಲೂಕಿನ ಬೇಖಾಡಾ, ಸನಾಂದ್ರೋ, ಮೋರ್ಗರ್ ಮತ್ತು ಭಾರವಂಧ್ ಗ್ರಾಮಗಳಲ್ಲಿ ಜ್ವರದಿಂದ ಸೆಪ್ಟೆಂಬರ್ 3 ಮತ್ತು 9 ರ ನಡುವೆ 5-50 ವಯಸ್ಸಿನ 12 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಮೊದಲು ಲಖ್ಪತ್ ತಾಲೂಕಿನ ವರ್ಮನಗರ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ದಯಾಪರ್ ಸಿಹೆಚ್‌ಸಿ ಮತ್ತು ಭುಜ್ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಬ್ಬ ರೋಗಿಯನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಯಿತು. ಅವರು ಜ್ವರದಿಂದ ಚೇತರಿಸಿಕೊಳ್ಳದೆ ಸಾವನ್ನಪ್ಪಿದದ್ದಾರೆ ಎಂದು ಲಖ್ಪತ್ ಪಂಚಾಯಿತಿ ಮಾಜಿ ಸದಸ್ಯ ಹುಸೇನ್ ರೇಮಾ ಹೇಳಿದ್ದಾರೆ.
ನಿವಾಸಿಗಳ ಪ್ರಕಾರ, ರೋಗಿಗಳಿಗೆ ಜ್ವರ, ನೆಗಡಿ, ಕೆಮ್ಮು, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆ ಇದೆ ಎಂದು ಮತ್ತೊಬ್ಬ ಜಿಲ್ಲಾ ಪಂಚಾಯಿತಿ ಸದಸ್ಯ ಮಮದ್ ಜಂಗ್ ಜಾಟ್ ಹೇಳಿದರು, ವೈದ್ಯರು ರೋಗದ ನಿಖರವಾದ ರೋಗನಿರ್ಣಯವನ್ನು ಮಾಡಲು ಸಾಧ್ಯವಾಗಲಿಲ್ಲ.