ವಾರಣಾಸಿ: ವಾರಣಾಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ಬೆಳಗ್ಗೆ 11:40ರ ಶುಭ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ.
ಮೋದಿ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ 12 ಮುಖ್ಯಮಂತ್ರಿಗಳು, ಮಿತ್ರಪಕ್ಷಗಳ ನಾಯಕರು, ಕೇಂದ್ರ ಸಚಿವರು ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆ.
ವಾರಣಾಸಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು 12 ಬಿಜೆಪಿ ಆಡಳಿತ ಮತ್ತು ಮೈತ್ರಿ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ.
ಬಿಜೆಪಿಯ ಎನ್‌ಡಿಎ ಪಾಲುದಾರರಾದ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಅಪ್ನಾ ದಳ(ಎಸ್) ಅಧ್ಯಕ್ಷೆ ಅನುಪ್ರಿಯಾ ಪಟೇಲ್ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂಪ್ರಕಾಶ್ ರಾಜ್‌ಭರ್ ಸಹ ಭಾಗವಹಿಸುವ ನಿರೀಕ್ಷೆಯಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಿತೀಶ್ ಕುಮಾರ್(ಬಿಹಾರ), ಪುಷ್ಕರ್ ಸಿಂಗ್ ಧಾಮಿ(ಉತ್ತರಾಖಂಡ), ಮೋಹನ್ ಯಾದವ್(ಮಧ್ಯಪ್ರದೇಶ), ವಿಷ್ಣು ದೇವ ಸಾಯಿ(ಛತ್ತೀಸ್‌ಗಢ), ಏಕನಾಥ್ ಶಿಂಧೆ(ಮಹಾರಾಷ್ಟ್ರ), ಭಜನ್ ಲಾಲ್ ಶರ್ಮಾ(ರಾಜಸ್ಥಾನ), ಹಿಮಂತ ಬಿಸ್ವಾ ಶರ್ಮಾ(ಅಸ್ಸಾಂ), ನಯಾಬ್ ಸಿಂಗ್ ಸೈನಿ(ಹರಿಯಾಣ), ಪ್ರಮೋದ್ ಸಾವಂತ್(ಗೋವಾ), ಪ್ರೇಮ್ ಸಿಂಗ್ ತಮಾಂಗ್(ಸಿಕ್ಕಿಂ) ಮತ್ತು ಮಾಣಿಕ್ ಸಹಾ(ತ್ರಿಪುರ) ಕೂಡ ಪ್ರಧಾನಿ ನಾಮಪತ್ರ ಸಲ್ಲಿಕೆಗೆ ಹಾಜರಾಗುವ ಸಾಧ್ಯತೆಯಿದೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾ ಸ್ನಾನ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾರಣಾಸಿಯ ಕಾಲಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನಾಮಪತ್ರ ಸಲ್ಲಿಸಲಿದ್ದಾರೆ. ಗಂಗಾನದಿಯ ದಡದಲ್ಲಿರುವ ದಶಾಶ್ವಮೇಧ ಘಾಟ್‌ನಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಅವರು ಪ್ರಾರ್ಥನೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ತಿಳಿಸಿದೆ. ಇಂದು ಗಂಗಾ ಸಪ್ತಮಿಯ ಸಂದರ್ಭದಲ್ಲಿ ಪ್ರಧಾನಿಯವರು ಗಂಗಾ ನದಿಯಲ್ಲಿ ಸ್ನಾನ ಮಾಡುವ ನಿರೀಕ್ಷೆಯಿದೆ. ನಾಮಪತ್ರ ಸಲ್ಲಿಕೆ ಬಳಿಕ ರುದ್ರಾಕ್ಷ ಕನ್ವೆನ್ಷನ್ ಸೆಂಟರ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಸಭೆ ನಡೆಸಲಿದ್ದಾರೆ.