
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ನೆಲ್ಲೈಯಪ್ಪರ್ ದೇವಸ್ಥಾನದ ಆನೆ ಗಾಂಧಿಮತಿಗೆ ಭಕ್ತರು ಮತ್ತು ದೇವಸ್ಥಾನ ಸಂಘದ ಪ್ರಯತ್ನದಿಂದ 12,000 ರೂಪಾಯಿ ಮೌಲ್ಯದ ಹೊಸ ಚರ್ಮದ ಚಪ್ಪಲಿ ಸಿಕ್ಕಿದೆ.
ದೇವಾಲಯದ ಆಡಳಿತ ಮಂಡಳಿಯು 52 ವರ್ಷ ವಯಸ್ಸಿನ ಆನೆ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಆನೆಯ ದೇಹದ ತೂಕ ಮತ್ತು ಸಾಮಾನ್ಯ ಯೋಗಕ್ಷೇಮ ಹೆಚ್ಚಿಸಲು ವೃತ್ತಿಪರ ವೈದ್ಯರ ಸಲಹೆ ಮೇರೆಗೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ದೇವಸ್ಥಾನದ ಆವರಣದ ಸುತ್ತ ಸುಮಾರು ಐದು ಕಿಲೋಮೀಟರ್ ದೂರದವರೆಗೆ ಗಾಂಧಿಮತಿಯನ್ನು ಪ್ರತಿದಿನ ವಾಕಿಂಗ್ಗೆ ಕರೆದೊಯ್ಯಲಾಗುತ್ತದೆ. ಈ ಆನೆಗೆ ವಾಕಿಂಗ್ ಹೋಗುವಾಗ ಕಾಲಿಗೆ ಕಲ್ಲು, ಮುಳ್ಳು ಚುಚ್ಚಬಾರದೆಂದು ಚಪ್ಪಲಿ ಹೊಲಿಸಲಾಗಿದೆ.
ಹಿಂದೂ ವರ್ತಕರ ಸಂಘ ಮತ್ತು ಭಕ್ತರು ಗಾಂಧಿಮತಿಗೆ ಒಂದು ಜೊತೆ ಚರ್ಮದ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ವೈದ್ಯರ ಶಿಫಾರಸಿನ ಮೇರೆಗೆ ಗಾಂಧಿಮತಿ ಹೊಸ ಚರ್ಮದ ಚಪ್ಪಲಿ ಧರಿಸುವಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ನೆಲ್ಲೈಯಪ್ಪರ್ ದೇವಸ್ಥಾನದಲ್ಲಿ ವಾರ್ಷಿಕ ಆನಿ ಉತ್ಸವವು ಜೂನ್ 3 ರಂದು ದೇವಾಲಯದ ಧ್ವಜಾರೋಹಣದೊಂದಿಗೆ ಪ್ರಾರಂಭವಾಗುತ್ತಿದ್ದಂತೆ, ಗಾಂಧಿಮತಿಯಮ್ಮನಿಗೆ ಸಹ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಉತ್ಸವದ ಸಂದರ್ಭದಲ್ಲಿ ಆನೆಯು ಪ್ರತಿನಿತ್ಯ ರಥ ಬೀದಿಯಲ್ಲಿ ಸಾಗುವುದು ವಾಡಿಕೆ. ಈ ವೇಳೆ ಗಾಂಧಿಮತಿ ಆಭರಣಗಳಿಂದ ಅಲಂಕರಿಸಲ್ಪಟ್ಟ ತನ್ನ ಕಾಲಿಗೆ ಜೋಡಿಸಲಾದ ಬೆಳ್ಳಿಯ ಸರಪಳಿಯನ್ನು ಧರಿಸಿ ಬೀದಿಗಳಲ್ಲಿ ಇದೀಗ ಹೊಸ ಅವತಾರದಲ್ಲಿ ಚರ್ಮದ ಚಪ್ಪಲಿಗಳನ್ನು ಧರಿಸಿ ಸಾಗಲಿದೆ.