ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದದ್ದು ಮಾತ್ರವಲ್ಲದೇ ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆಘಾತಕಾರಿ ಘಟನೆಯು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ. ಸೂಕ್ತ ಮಾಹಿತಿ ಆಧರಿಸಿದ ಪೊಲೀಸರು ಪ್ರಕರಣ ಸಂಬಂಧ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹರಿಬಿಟ್ಟ ಇನ್ನಿಬ್ಬರು ಯುವಕರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನೈನಿ ಪ್ರದೇಶದ ನಿವಾಸಿಯಾದ ಸಂತ್ರಸ್ತೆಯ ತಂದೆ ಈ ವಿಚಾರವಾಗಿ ಮಾತನಾಡಿದ್ದು, ನನ್ನ ಮಗಳಿಗೆ ಈಗ 12 ವರ್ಷ ವಯಸ್ಸು. ಆದರೆ ಪೊಲೀಸರು 14 ವರ್ಷ ಎಂದು ನಮೂದಿಸಿಕೊಂಡಿದ್ದಾರೆ. ಎಫ್ಐಆರ್ನ ಪ್ರಕಾರ ಶಂಶೇರ್ ಅಲಿ ನನ್ನ ಮಗಳನ್ನು ಅರೈಲ್ ಎಂಬಲ್ಲಿಗೆ ಕರೆದೊಯ್ದು ಅಲ್ಲಿ ತನ್ನ ಸ್ನೇಹಿತರ ಜೊತೆಯಲ್ಲಿ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಶಂಶೇರ್ ಹಾಗೂ ಫೈಜಲ್ರನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಶಂಶೇರ್ ತಾನು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಹಾಗೂ ಪೈಝಲ್ ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿದ್ದಾಗಿ ಹೇಳಿದ್ದಾನೆ. ಅತ್ಯಾಚಾರದ ಬಳಿಕ ಫೈಜಲ್ ಬಾಲಕಿಗೆ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಫೈಜಲ್ ಪದೇ ಪದೇ ಬಾಲಕಿಗೆ ಕರೆ ಮಾಡಿ ಬೆದರಿಸುತ್ತಿದ್ದ ಎನ್ನಲಾಗಿದೆ. ಒಮ್ಮೆ ಬಾಲಕಿಯ ಅಣ್ಣ ಫೋನ್ ಕೈಗೆತ್ತಿಕೊಂಡ ವೇಳೆಯಲ್ಲಿ ಬಾಲಕಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಳಿಕ ಬಾಲಕಿಯ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.