ಪಾಟ್ನಾ: ಸ್ಪೈಡರ್‌ಮ್ಯಾನ್ ಸಾಹಸಗಳನ್ನು ನೀವು ದೂರದರ್ಶನದಲ್ಲಿ ನೋಡಿರಬಹುದು. ಹಾಗೆಯೇ ಇಲ್ಲಿಬ್ಬರು ಬಾಲಕಿಯರು ತಾವ್ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಸಾಹಸ ಮಾಡುತ್ತಿದ್ದಾರೆ.
ಎತ್ತರದ ಗೋಡೆಗಳನ್ನು ಏರುವ ಬಿಹಾರದ ಇಬ್ಬರು ಬಾಲಕಿಯರನ್ನು ಸೂಪರ್ ಹೀರೋ ಸ್ಪೈಡರ್‌ಮ್ಯಾನ್‌ಗೆ ಹೋಲಿಸಲಾಗುತ್ತಿದೆ. ಬಹಳ ಸುಲಭವಾಗಿ ಗೋಡೆ ಹತ್ತುವ ಬಾಲಕಿಯರ ಸಾಹಸದ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಸ್ಪೈಡರ್ ಗರ್ಲ್ಸ್ ಎಂದೇ ಕರೆಯಲ್ಪಡುವ ಬಾಲಕಿಯರು, ಯಾವುದೇ ಬಾಹ್ಯ ಬೆಂಬಲವನ್ನು ತೆಗೆದುಕೊಳ್ಳದೆ ಪಟಪಟನೇ 12 ಅಡಿ ಎತ್ತರದ ಗೋಡೆಗಳನ್ನು ಏರುತ್ತಾರೆ. ಪಾಟ್ನಾದ 11 ವರ್ಷದ ಅಕ್ಷಿತಾ ಗುಪ್ತಾ, 12 ಅಡಿ ಎತ್ತರದ ಗೋಡೆಗಳನ್ನು ಯಾವುದೇ ಬೆಂಬಲವನ್ನು ತೆಗೆದುಕೊಳ್ಳದೆ, ಅದೂ ಯಾವುದೇ ತರಬೇತಿಯಿಲ್ಲದೆ ಏರುತ್ತಾಳೆ. ಆಕೆಯ 9 ವರ್ಷದ ಸಹೋದರಿ ಸಹ ಅವಳೊಂದಿಗೆ ಗೋಡೆಗಳನ್ನು ಹತ್ತುವುದನ್ನು ಅಭ್ಯಾಸ ಮಾಡುತ್ತಾಳೆ.
ಪೋಷಕರು ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದಾಗ, ಗೋಡೆ ಹತ್ತಲು ಅಕ್ಷಿತಾ ಪ್ರಾರಂಭಿಸಿದ್ದಾಳೆ. ಅಭ್ಯಾಸವಾದಂತೆ ಗೋಡೆಗಳ ಮೇಲೆ ವೇಗವಾಗಿ ನಡೆಯಲು ಪ್ರಾರಂಭಿಸಿದೆ ಎಂಬುದಾಗಿ ಆಕೆ ತಿಳಿಸಿದ್ದಾಳೆ. ಇದನ್ನು ಮೊದಲಿಗೆ ಪೋಷಕರು ನೋಡಿದಾಗ ಗೋಡೆ ಹತ್ತದಂತೆ ತಡೆದಿದ್ದಾರೆ. ಆದರೂ ಕೂಡ ಅಕ್ಷಿತಾ ಗೋಡೆ ಹತ್ತುವುದನ್ನು ಮುಂದುವರಿಸಿದ್ದಾಳೆ. ಹೀಗಾಗಿ ಇಂದು ಸ್ಪೈಡರ್‌ಮ್ಯಾನ್‌ನಂತೆ ಗೋಡೆಗಳನ್ನು ಏರುತ್ತಾಳೆ. ಶೀಘ್ರದಲ್ಲೇ ಹಿಮಾಲಯದ ಶಿಖರಗಳನ್ನು ಏರುವ ಹಂಬಲವಿರುವಾಗಿ ಬಾಲಕಿ ಆಶಯ ವ್ಯಕ್ತಪಡಿಸಿದ್ದಾಳೆ.
ಸಹೋದರಿಯ ಸಾಹಸಗಳನ್ನು ನೋಡುತ್ತಿದ್ದ ಕಿರಿಯ ಸೋದರಿ ಕೂಡ ತನ್ನ ಅಕ್ಕನಂತೆ ತಾನು ಗೋಡೆ ಹತ್ತುವ ಅಭ್ಯಾಸ ಮಾಡಿಕೊಳ್ಳಲು ಪ್ರಾರಂಭಿಸಿದ್ದಾಳೆ. ಇದೀಗ ಪೋಷಕರು ತಮ್ಮಿಬ್ಬರು ಹೆಣ್ಣುಮಕ್ಕಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.