ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ವಿವಿಧ ಬಾಲ ಮಂದಿರಗಳಿಂದ ಕಾಣೆಯಾಗಿರುವ 119 ಮಕ್ಕಳು ಈವರೆಗೂ ಪತ್ತೆಯಾಗಿಲ್ಲ ಎಂದು ರಾಜ್ಯ ಸರ್ಕಾರ, ಹೈಕೋರ್ಟಿಗೆ ಮಾಹಿತಿ ನೀಡಿದೆ.
ಕೆ.ಸಿ. ರಾಜಣ್ಣ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ರಾಜ್ಯ ಸರ್ಕಾರ ಈ ಕುರಿತ ಮಾಹಿತಿಯನ್ನು ಸಲ್ಲಿಸಿದೆ.
2015 – 16 ಹಾಗೂ ಅಕ್ಟೋಬರ್ 2021 ರವರೆಗೆ ನಾಪತ್ತೆಯಾಗಿದ್ದ 484 ಮಕ್ಕಳ ಪೈಕಿ 352 ಮಂದಿಯನ್ನು ಪತ್ತೆಹಚ್ಚಲಾಗಿತ್ತು. ಉಳಿದ 132 ಮಂದಿಯ ಪೈಕಿ ಫೆಬ್ರವರಿ 2022 ರ ವರೆಗೆ 13 ಮಂದಿ ಪತ್ತೆಯಾಗಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಈ 13 ಮಂದಿ ಪೈಕಿ 11 ಮಕ್ಕಳನ್ನು ಅವರ ಕುಟುಂಬದೊಂದಿಗೆ ಸೇರಿಸಲಾಗಿದ್ದು, ಉಳಿದವರಿಗೆ ಬಾಲ ಮಂದಿರದಲ್ಲಿ ಆಶ್ರಯ ಕೊಡಲಾಗಿದೆ. ಇನ್ನೂ ಕಣ್ಮರೆಯಾಗಿರುವ 119 ಮಕ್ಕಳ ಪತ್ತೆಗಾಗಿ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.