ಸ್ಥೂಲಕಾಯದಿಂದ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಯುವತಿಗೆ ಮಧ್ಯಪ್ರದೇಶದ ಇಂದೋರ್ ನ ಮೈ ಆಸ್ಪತ್ರೆಯಲ್ಲಿ ಉಚಿತ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 116 ಕೆಜಿ ತೂಕದ ಅಂಬೇಡ್ಕರ್ ನಗರ ನಿವಾಸಿಯಾಗಿದ್ದ ಯುವತಿ ಸ್ಥೂಲಕಾಯದಿಂದ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ನಡೆಯಲೂ ಸಹ ಸಮಸ್ಯೆ ಎದುರಿಸುತ್ತಿದ್ದಳು. ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಯುವತಿಯು 6 ತಿಂಗಳಲ್ಲಿ ತೂಕವನ್ನು ಕಳೆದುಕೊಳ್ಳುತ್ತಾಳೆ. ಆಕೆಯ ತೂಕ 60 ಕೆಜಿಗೆ ಇಳಿಯುವ ನಿರೀಕ್ಷೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಶಸ್ತ್ರಚಿಕಿತ್ಸಕ ಡಾ.ಅರವಿಂದ್ ಘಂಘೋರಿಯಾ ಮತ್ತು ಅವರ ತಂಡವು ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಕ್ಯಾಬಿನೆಟ್ ಸಚಿವೆ ಉಷಾ ಠಾಕೂರ್ ಅವರು ಯುವತಿಗೆ ಸಹಾಯ ಮಾಡಲು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ಅಗತ್ಯ ಸ್ಟೇಪ್ಲರ್‌ಗಳನ್ನು ಪಡೆಯಲು ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ತಿಳಿಸಿದರು. 26 ವರ್ಷದ ಯುವತಿ ಬೊಜ್ಜಿನಿಂದಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿದ್ದಳು.
“ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿದೆ. ಆದರೆ ಆಪರೇಷನ್ ಸಮಯದಲ್ಲಿ ಬಳಸುವ ಸ್ಟೇಪ್ಲರ್ ಅನ್ನು ರೋಗಿಯು ಸ್ವಂತ ಖರ್ಚಿನಲ್ಲಿ ತರಬೇಕು. ಇದಕ್ಕೆ ಸುಮಾರು 1 ಲಕ್ಷ ರೂಪಾಯಿ ಖರ್ಚಾಗುತ್ತೆ. ದುರ್ಬಲ ಆರ್ಥಿಕ ಸ್ಥಿತಿಯಿಂದಾಗಿ ಸಚಿವೆ ಉಷಾ ಠಾಕೂರ್ ಅವರು ಸ್ಟೇಪ್ಲರ್‌ಗಳನ್ನು ವ್ಯವಸ್ಥೆ ಮಾಡಲು ವೈದ್ಯಕೀಯ ಕಾಲೇಜು ಡೀನ್‌ಗೆ ಸೂಚಿಸಿದರು ”ಎಂದು ಡಾ ಘಂಘೋರಿಯಾ ಹೇಳಿದರು.
ಎಂಟು ವರ್ಷಗಳ ಹಿಂದೆ MY ಆಸ್ಪತ್ರೆಯಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಈವರೆಗೆ ಆಸ್ಪತ್ರೆಯಲ್ಲಿ ಸುಮಾರು 170 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. MY ಆಸ್ಪತ್ರೆಯು ರಾಜ್ಯದಲ್ಲಿ ಬೇರಿಯಾಟ್ರಿಕ್ ಸರ್ಜರಿ ಮಾಡುವ ಏಕೈಕ ಸರ್ಕಾರಿ ಆಸ್ಪತ್ರೆಯಾಗಿದೆ.