ನೂರಕ್ಕೂ ಅಧಿಕ ಮಹಿಳೆಯರಿಗೆ ಫೋನ್ ಮೂಲಕ ಕಿರುಕುಳ ನೀಡಿದ ಆರೋಪಿಯನ್ನು ಉತ್ತರ ಪ್ರದೇಶದ ಕೌಶಂಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರವೀಂದ್ರ ಕುಮಾರ್ ಮೌರ್ಯ ಎಂದು ಗುರುತಿಸಲಾಗಿದೆ. ಈತನನ್ನು ಸೈನಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 45 ವರ್ಷದ ವ್ಯಕ್ತಿಯು ವಾಟರ್ ಪಂಪ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ಉತ್ತರ ಪ್ರದೇಶದ 36 ಜಿಲ್ಲೆಗಳಲ್ಲಿ ಒಟ್ಟು 113 ಕೇಸುಗಳು ದಾಖಲಾಗಿವೆ.
ಮೌರ್ಯ ವಿರುದ್ಧ ಉನ್ನಾವ್, ಕಾನ್ಪುರ ನಗರ, ಅಂಬೇಡ್ಕರ್ ನಗರ, ಪ್ರತಾಪ್‌ಗಢ, ಪ್ರಯಾಗ್‌ರಾಜ್, ರಾಯ್ ಬರೇಲಿ, ಹರ್ದೋಯಿ, ಸುಲ್ತಾನ್‌ಪುರ, ಮಿರ್ಜಾಪುರ, ಗೋರಖ್‌ಪುರ, ಅಮೇಥಿ, ಘಾಜಿಪುರ, ಅಜಮ್‌ಗಢ, ಕೌಶಂಬಿ ಮತ್ತು ಇತರ ಜಿಲ್ಲೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈತನನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಲಾಗಿತ್ತು.
ಈತನ ವಿರುದ್ಧ ಲಖನೌ ಠಾಣೆಯಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. 19 ಮಂದಿ ಮಹಿಳೆಯರು ಲಖನೌ ಠಾಣೆಯಲ್ಲಿ ಈತನ ವಿರುದ್ಧ ಕಿರುಕುಳದ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮೌರ್ಯ ಮನಸ್ಸಿಗೆ ಬಂದ ಸಂಖ್ಯೆಯನ್ನು ಡಯಲ್ ಮಾಡುತ್ತಿದ್ದನು. ಇವುಗಳಲ್ಲಿ ಯಾವುದಾದರೊಂದು ಫೋನ್ ಕರೆಯನ್ನು ಮಹಿಳೆಯರು ರಿಸೀವ್ ಮಾಡಿದಲ್ಲಿ, ಅವರ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ. ವಿಡಿಯೋ ಕಾಲ್ಗಳನ್ನು ಮಾಡಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ಸಹ ಕೆಲವು ಮಹಿಳೆಯರು ದೂರು ನೀಡಿದ್ದಾರೆ.