ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಕಡಿಮೆ ಸಂಬಳಕ್ಕೆ ದುಡಿಯುವವರು ಅನೇಕರಿದ್ದಾರೆ. ಆದ್ರೆ ಅಮೆರಿಕಾದಲ್ಲಿ ಹೆಚ್ಚಿನ ಸಂಬಳದ ಆಫರ್ ಮಾಡಿದ್ರೂ ಕೆಲಸಕ್ಕೆ ಜನ ಸಿಗ್ತಿಲ್ಲ.
ಹೌದು, ಕಳೆದ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಖ್ಯಾತ ಬರ್ಗರ್ ಕಂಪನಿ ಮೆಕ್ ಡೊನಾಲ್ಡ್ಸ್ ಅಮೆರಿಕದಲ್ಲಿ ಉದ್ಯೋಗಿಗಳ ಕೊರತೆಯುಂಟಾಗಿದೆ. ಕಂಪನಿಯ ಒರೆಗಾನ್ ಮೂಲದ ಫ್ರಾಂಚೈಸಿಯಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದೇ ಕಾರಣಕ್ಕೆ ಕಂಪನಿ 14 ರಿಂದ 15 ವರ್ಷ ವಯಸ್ಸಿನವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ. ಆದ್ರೆ ಈ ವಯಸ್ಸಿನವರೂ ಕೆಲಸಕ್ಕೆ ಸಿಗ್ತಿಲ್ಲ.
ಯುಎಸ್ ಕಾನೂನಿನ ಪ್ರಕಾರ, 14 ವರ್ಷ ಮೇಲ್ಪಟ್ಟ ಹದಿಹರೆಯದವರು ಆಹಾರ ಸೇವೆಯಲ್ಲಿ ಕೆಲಸ ಮಾಡಬಹುದು. ಮಕ್ಕಳ ಶಾಲೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಕಂಪನಿಗಳು ಗಮನ ನೀಡಬೇಕಾಗುತ್ತದೆ. ಕಂಪನಿಯ ಫ್ರ್ಯಾಂಚೈಸ್ ಮೆಡ್‌ಫೋರ್ಡ್ ರೆಸ್ಟೋರೆಂಟ್‌ನ ಆಪರೇಟರ್ ಹೀದರ್ ಕೆನಡಿ, ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ನೋಡಿರಲಿಲ್ಲ ಎನ್ನುತ್ತಾರೆ. ಉದ್ಯೋಗಿಗಳನ್ನು ಆಕರ್ಷಿಸಲು ಕಂಪನಿ ಸಂಬಳ ಹೆಚ್ಚಿಸಿದೆ. ಪ್ರತಿ ಗಂಟೆಗೆ ಕನಿಷ್ಠ 1100 ರೂಪಾಯಿ ನೀಡ್ತಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಗಂಟೆಗೆ ಕನಿಷ್ಠ 1100 ರೂಪಾಯಿ ಸಂಬಳ ನೀಡುವುದಾಗಿ ಘೋಷಣೆ ಮಾಡಿದ್ರೂ, ಕೆಲಸಕ್ಕೆ ಜನ ಸಿಗ್ತಿಲ್ಲ. 16 ವರ್ಷದೊಳಗಿನ ಕೇವಲ 25 ಮಕ್ಕಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ.