ಟ್ವಿಟರ್‌ನ ಹೊಸ ಸಿಇಓ ಆಗಿರುವ ಪರಾಗ್ ಅಗರ್ವಾಲ್, ಹುದ್ದೆಗೆ ಬರುತ್ತಲೇ ವಿವಾದವೊಂದಕ್ಕೆ ಗ್ರಾಸವಾಗಿದ್ದಾರೆ. ಮೊದಲೇ ಕೋಮು, ರಾಜಕೀಯ ಸಿದ್ಧಾಂತಗಳ ಕೆಸರೆರಚಾಟದ ಅಖಾಡವಾಗಿಬಿಟ್ಟಿರುವ ಸಾಮಾಜಿಕ ಜಾಲತಾಣದಲ್ಲಿ, ಇಂಥ ಹುದ್ದೆಗಳಲ್ಲಿರುವ ಮಂದಿಯನ್ನು ನೆಟ್ಟಿಗರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.
ಪರಾಗ್ 11 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಒಂದು ಈಗ ಸದ್ದು ಮಾಡುತ್ತಿದೆ. ಟಿವಿ ಶೋ ಒಂದರಲ್ಲಿ ಹೇಳಲಾದ ಮಾತುಗಳ ಯಥಾವತ್ತು ಭಾಷಾಂತರ ಮಾಡಿದ್ದ ಪರಾಗ್‌ರ ಈ ಟ್ವೀಟ್‌ನಲ್ಲಿ ಮುಸ್ಲಿಮರು, ಬಿಳಿಯರು, ತೀವ್ರವಾದಿಗಳು ಹಾಗೂ ಜನಾಂಗೀಯ ದ್ವೇಷಿಗಳ ವಿರುದ್ಧ ಪ್ರಶ್ನೆಗಳನ್ನು ಕೇಳಲಾಗಿತ್ತು.
“ಮುಸ್ಲಿಮರು ಹಾಗೂ ತೀವ್ರವಾದಿಗಳ ನಡುವೆ ವ್ಯತ್ಯಾಸ ಮಾಡಲು ನಿಮಗೆ ಸಾಧ್ಯವಾಗದೇ ಇದ್ದಲ್ಲಿ, ಜನರು ಮತ್ತು ಜನಾಂಗೀಯ ದ್ವೇಷಿಗಳ ನಡುವೆ ನಾನೇಕೆ ವ್ಯತ್ಯಾಸ ಕಾಣಲಿ” ಎಂದು ಕೇಳಿದ್ದ ಪರಾಗ್ ಹೀಗೆ ಟ್ವೀಟ್ ಮಾಡಿದ್ದರು.
2010ರಲ್ಲಿ ಮಾಡಲಾದ ಈ ಟ್ವೀಟ್ ಇತ್ತೀಚೆಗೆ ಕೆಲವೊಂದು ವರ್ಗದ ಜನರ ಸಿಟ್ಟಿಗೆ ಕಾರಣವಾಗಿದೆ.
ಜಾಕ್ ಡೋರ್ಸೆ ಅಥವಾ ಡಿಕ್ ಕೊಸ್ಟೋಲೋರಷ್ಟು ಜನಪ್ರಿಯರೇನೂ ಅಲ್ಲದ ಪರಾಗ್, ಸಾಮಾನ್ಯವಾಗಿ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಿನ ಮಂದಿಗೆ ಪರಿಚಿತರಲ್ಲ. ಆದರೂ ಸಹ ಟ್ವಿಟರ್‌ನ ಏಳಿಗೆಗೆ ಪರಾಗ್ ಶ್ರಮ ಬಹಳಷ್ಟಿದೆ ಎಂದು ಖುದ್ದು ಟ್ವಿಟರ್ ಸಿಇಓ ಜಾಕ್ ಡೋರ್ಸೆ ತಿಳಿಸಿದ್ದಾರೆ.
ರಾಜಕೀಯವಾಗಿ ತಟಸ್ಥ ನಿಲುವು ತಳೆದು, ಆರೋಗ್ಯಕರವಾದ ಸಾರ್ವಜನಿಕ ಚರ್ಚೆಗಳಿಗೆ ವೇದಿಕೆ ಒದಗಿಸಿಕೊಡುವುದಾಗಿ ಹೇಳುವ ಟ್ವಿಟರ್‌ನ ಮುಖ್ಯ ಸಿಬ್ಬಂದಿಯಿಂದಲೇ ಇಂಥ ಹೇಳಿಕೆ ಬಂದರೆ ಹೇಗೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಿರಿಯ ಸಲಹೆಗಾರ ಜೇಸನ್ ಮಿಲ್ಲರ್‌ರಿಂದ ಹಿಡಿದು, ಸಾಮಾನ್ಯ ನೆಟ್ಟಿಗರವರೆಗೂ ಪ್ರಶ್ನಿಸಿದ್ದಾರೆ.
ಐಐಟಿ ಬಾಂಬೆ ಪದವೀಧರರಾದ ಪರಾಗ್ ಅಗರ್ವಾಲ್, ಜಾಕ್ ಡೋರ್ಸೆ ರಾಜೀನಾಮೆ ಬಳಿಕ ಟ್ವಿಟರ್‌ನ ಸಿಇಓ ಹುದ್ದೆಗೆ ಏರಿದ್ದಾರೆ.