22 ವರ್ಷದ ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 11 ವರ್ಷದ ಬಾಲಕಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಗರ್ಭಪಾತ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ಜೆ ಕಥಾವಾಲ್ಲಾ ಹಾಗೂ ಅಭಯ್ ಅಹುಜಾ ಅವರ ಪೀಠವು 11 ವರ್ಷ 9 ತಿಂಗಳ ಪ್ರಾಯದ ಅಪ್ರಾಪ್ತೆಯು ಗರ್ಭ ಧರಿಸಿ 20 ವಾರಗಳು ಮೀರಿದ್ದರೂ ಸಹ ಭ್ರೂಣವು ಕೇವಲ ಸಣ್ಣ ಅಸಹಜತೆಗಳನ್ನು ಹೊಂದಿದ್ದರೂ ಸಹ ಆಕೆಗೆ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನೀಡಿದೆ.
22.5 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಕೋರಿ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ಆದೇಶವನ್ನು ಪ್ರಕಟಿಸಿದೆ.
ಗರ್ಭಾವಸ್ಥೆಯು ತಾಯಿಯ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟುಮಾಡುವಂತಿದ್ದರೆ ಅಂತಹ ಗರ್ಭಧಾರಣೆಯನ್ನು ಮುಂದುವರಿಸುವಂತೆ ಒತ್ತಾಯಿಸುವುದು ಆಕೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬ 2019ರ ಆದೇಶವೊಂದನ್ನು ಉದಾಹರಣೆಯಾಗಿಟ್ಟುಕೊಂಡು ಬಾಂಬೆ ಹೈಕೋರ್ಟ್ ಈ ಆದೇಶ ನೀಡಿದೆ.