ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 1ರಿಂದ 10ನೇ ತರಗತಿ ಮಕ್ಕಳಿಗೆ ಉಚಿತವಾಗಿ ಶೂ, ಸಾಕ್ಸ್ ವಿತರಿಸಲಾಗುವುದು.
2024 -25 ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಶಿಕ್ಷಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 42.65 ಲಕ್ಷ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಒಟ್ಟು 121 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ಅಥವಾ ಪಾದರಕ್ಷೆ ವಿತರಿಸಲಾಗುವುದು.
ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಎಸ್.ಡಿ.ಎಂ.ಸಿ.ಗೆ ವಹಿಸುವುದು. ಒಂದು ಜೊತೆ ಕಪ್ಪು ಬಣ್ಣದ ಶೂಗಳನ್ನು, ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ ಗಳನ್ನು ಖರೀದಿಸಿ ವಿತರಿಸಲಿದ್ದು, ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ, ಸಾಕ್ಸ್ ಗಳ ಬದಲಿಗೆ ಪಾದರಕ್ಷೆಗಳನ್ನು ಖರೀದಿಸಿ ವಿತರಿಸಲು ತಿಳಿಸಲಾಗಿದೆ.