ಬೆಂಗಳೂರು- ಧರ್ಮ ದಂಗಲ್ ಶುರುವಾದ ಬೆನ್ನಲ್ಲೇ ಮಸೀದಿಗಳಲ್ಲಿ ಧ್ವನಿವರ್ಧಕ ಹಾಕುವಂತಿಲ್ಲ ಅಂತ ವಿರೋಧ ವ್ಯಕ್ತವಾಗಿತ್ತು. ಅನೇಕ ಸ್ವಾಮೀಜಿಗಳು, ಹಿಂದು ಪರ ಸಂಘಟನೆಗಳು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಆಜಾನ್ ವಿರುದ್ಧ ಹೋರಾಟ ಶುರುವಾದ ಬೆನ್ನಲ್ಲೇ ಸರ್ಕಾರ ಅನುಮತಿ ಇಲ್ಲದೆ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ನಿರ್ಬಂಧ ಹೇರಿತ್ತು. ಇದೀಗ ಧ್ವನಿವರ್ಧಕ ಬಳಸುವಂತೆ ಗ್ರೀನ್ ಸಿಗ್ನಲ್ ನೀಡಿದೆ.
ಹೌದು, ಲೌಡ್ ಸ್ಪೀಕರ್ಗೆ ಪರವಾನಿಗೆ ನೀಡಲು ಮಸೀದಿ, ದೇವಾಲಯ, ಚರ್ಚ್‍ಗಳಿಗೆ, ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಪರವಾನಗಿ ನೀಡುವ ಅಧಿಕಾರವನ್ನು ಸರ್ಕಾರ ರಾಜ್ಯ ಪೊಲೀಸರಿಗೆ ನೀಡಲಾಗಿತ್ತು. ಅದರಂತೆ ಸುಮಾರು 17,850 ಅರ್ಜಿಗಳು ಬಂದಿದ್ದವಂತೆ. ಇದರಲ್ಲಿ 10,889 ಮಸಿದಿಗಳಿಗೆ, 3000ಕ್ಕೂ ಹೆಚ್ಚು ಹಿಂದೂ ದೇವಾಲಯ, 1,400ಕ್ಕೂ ಹೆಚ್ಚು ಚರ್ಚ್‍ಗಳಿಗೆ ಸರ್ಕಾರ 2 ವರ್ಷಗಳವರೆಗೆ ಅನುಮನತಿ ನೀಡಿದ್ದು, 450 ರೂ ಶುಲ್ಕ ಕಟ್ಟಬೇಕು.
ಇನ್ನು ಈ ಧ್ವನಿವರ್ಧಕ ಬಳಸಲು ಒಂದಿಷ್ಟು ನಿಯಮ ಮಾಡಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಲೌಡ್ ಸ್ಪೀಕರ್ ಬಳಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ಮತ್ತು ರಾತ್ರಿ 70 ಡೆಸಿಬಲ್ ಶಬ್ದದ ಮಟ್ಟ ಇರಬೇಕು. ವಾಣಿಜ್ಯ ಪ್ರದೇಶಗಳಲ್ಲಿ ಹಗಲಿನಲ್ಲಿ 65 ಡೆಸಿಬಲ್ ಮತ್ತು ರಾತ್ರಿ 55 ಡೆಸಿಬಲ್ ಶಬ್ದದ ಮಟ್ಟ ಇರಬೇಕು. ವಸತಿ ವಲಯಗಳಲ್ಲಿ, ಶಬ್ದದ ಮಟ್ಟವು ಹಗಲಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿಯಲ್ಲಿ 45 ಡೆಸಿಬಲ್ ಬಳಸಬಹುದು. ಶಾಂತ ವಲಯದಲ್ಲಿ ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿಯಲ್ಲಿ 40 ಡೆಸಿಬಲ್ ಇರಬೇಕು. ಲೌಡ್ ಸ್ಪೀಕರ್ ಜಾಗದಲ್ಲಿ ಡೆಸಿಬಲ್ ನಿಯಂತ್ರಿಸೋ ಉಪಕರಣ ಅಳವಡಿಕೆ ಕಡ್ಡಾಯ ಎಂದು ಹೇಳಿದೆ.