ತುಮಕೂರಿನಲ್ಲಿ 108 ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬಾರದೇ ಜನರಿಗೆ ಸಾಕಷ್ಟು ತೊಂದರೆ ಆಗ್ತಾ ಇತ್ತು. ಮೊನ್ನೆ ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಚಿರತೆ ದಾಳಿಗೆ ಇಬ್ಬರು ಮಕ್ಕಳು ಒಳಗಾಗಿದ್ದರು. ಆದರೆ ಈ ವೇಳೆ ಆಂಬ್ಯುಲೆನ್ಸ್ ಇದ್ದರೂ ಸ್ಥಳಕ್ಕೆ ತೆರಳದೇ ಬೇಜವಾಬ್ದಾರಿ ತೋರಿದ್ದರು 108 ಸಿಬ್ಬಂದಿ. ಇದರಿಂದ ಸಿಟ್ಟಿಗೆದ್ದ ತಹಶೀಲ್ದಾರ್ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ.
ಹೌದು, 108 ಆಂಬ್ಯುಲೆನ್ಸ್ ಕರ್ಮಕಾಂಡವನ್ನು ಬಯಲಿಗೆಳೆದಿದ್ದಾರೆ ಕೊರಟಗೆರೆ ತಹಶೀಲ್ದಾರ್ ನಹೀದಾ ಜಂಜಂ. ರಾಮಕ್ಕ ಅನ್ನೋ ಮಹಿಳೆ ಹೆಸರಿನಲ್ಲಿ 108 ಆಂಬ್ಯುಲೆನ್ಸ್ ಸೇವೆಗೆ ತಹಶೀಲ್ದಾರ್ ಕರೆ ಮಾಡಿದ್ದಾರೆ. ವಡ್ಡಗೆರೆ ಬಳಿ ಅಪಘಾತವಾಗಿದೆ, ಕೂಡಲೇ ಆಂಬ್ಯುಲೆನ್ಸ್ ಬೇಕು ಅಂತಾ ಮಾಹಿತಿ ನೀಡಿದ್ದಾರೆ. ಆಗ ಸಿಬ್ಬಂದಿ ತೋವಿನಕೆರೆಯಲ್ಲಿ ಆಂಬ್ಯುಲೆನ್ಸ್ ಇದೆ,1 ಗಂಟೆ ತಡವಾಗುತ್ತೆ ಎಂದಿದ್ದಾರೆ. ಬೇರೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುವಂತೆ 108 ಸಿಬ್ಬಂದಿ ಹಾರಿಕೆ ಉತ್ತರ ನೀಡಿದ್ದಾರೆ.
1 ಗಂಟೆಯಾದರೂ ಆಂಬ್ಯುಲೆನ್ಸ್ ಬಾರದ್ದಕ್ಕೆ ಸ್ಥಳದಿಂದ ವಾಪಸ್ ತೆರಳಿದ್ದಾರೆ ತಹಶೀಲ್ದಾರ್. ನಂತರ ನಿರ್ಲಕ್ಷ ತೋರಿದ 108 ಆಂಬ್ಯುಲೆನ್ಸ್ ವ್ಯವಸ್ಥೆ ವಿರುದ್ದ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ ತಹಶೀಲ್ದಾರ್ ನಹೀದಾ. ತಹಶೀಲ್ದಾರ್ ನೀಡಿದ ವರದಿಯನ್ನು ಡಿ ಎಚ್ ಒ ಡಾ. ಮಂಜುನಾಥ್ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡೋದಾಗಿ ತಿಳಿಸಿದ್ದಾರೆ.