ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಲು ಸಿದ್ಧವಾಗಿದೆ.
ಪ್ರತಿಮೆಯ ನಿರ್ಮಾಣ ಕಾರ್ಯವು ಪ್ರಸ್ತುತ ಪ್ರಗತಿಯಲ್ಲಿದ್ದು, ಪ್ರತಿಮೆಗೆ 4,000 ಕೆ.ಜಿ. ತೂಕದ ಖಡ್ಗವನ್ನು ತಯಾರಿಸಲಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಬೆಂಗಳೂರು ನಗರದ ಸ್ಥಾಪಕ ಕೆಂಪೇಗೌಡ ಅವರ ಹೆಸರಿನಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 23 ಎಕರೆ ವಿಸ್ತೀರ್ಣದ ಹೆರಿಟೇಜ್ ಪಾರ್ಕ್‌ನಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ.
ಪ್ರತಿಮೆಯನ್ನು ವಿಮಾನ ನಿಲ್ದಾಣದ ಪ್ರಮುಖ ಆಕರ್ಷಣೆಯಾಗಿ ರೂಪಿಸಲು ಯೋಜಿಸಲಾಗಿದೆ. ಬೆಂಗಳೂರಿಗೆ ಆಗಮಿಸುವ ಮತ್ತು ಹೊರಡುವ ಪ್ರಯಾಣಿಕರು ವಾಸ್ತುಶೈಲಿಯ ಅದ್ಭುತವನ್ನು ವೀಕ್ಷಿಸುತ್ತಾರೆ.
ನವದೆಹಲಿಯಿಂದ ಬೆಂಗಳೂರಿಗೆ ಸೋಮವಾರ ವಿಶೇಷ ಟ್ರಕ್‌ನಲ್ಲಿ ಖಡ್ಗ ಆಗಮಿಸಿತ್ತು. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಖಡ್ಗ ಸ್ವಾಗತಿಸಿ, ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 85 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗುತ್ತಿದೆ. ನೋಯ್ಡಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಾಸ್ತುಶಿಲ್ಪಿ ರಾಮ್ ವಾನರ್ ಜಿ ಸುತಾರ್ ಅವರು ಪ್ರತಿಮೆಯ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ.