ಚೆನ್ನೈ: ಭಾರತದ ಪ್ರಧಾನ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಸುಪರ್ದಿಯಲ್ಲಿದ್ದ ಬರೋಬ್ಬರಿ ಒಂದು ಕ್ವಿಂಟಾಲ್ ಚಿನ್ನ ನಾಪತ್ತೆಯಾಗಿದೆ. ಇಂತಹ ಸುರಕ್ಷಿತ ಸ್ಥಳದಿಂದಲೇ 45 ಕೋಟಿ ರೂಪಾಯಿ ಮೌಲ್ಯದ 103 ಕೆಜಿ ಚಿನ್ನ ನಾಪತ್ತೆಯಾಗಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
2012 ರಲ್ಲಿ ಚೆನ್ನೈ ಮೂಲದ ಆಮದುದಾರರಿಂದ ಈ ಚಿನ್ನವನ್ನು ಸಿಬಿಐ ವಶಕ್ಕೆ ಪಡೆದುಕೊಂಡಿತ್ತು. ಸರಾನಾ ಕಾರ್ಪೋರೇಷನ್ ಲಿಮಿಟೆಡ್ ಕಚೇರಿಗಳಲ್ಲಿ ಈ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಸಿಬಿಐ ಸುಪರ್ದಿಯಲ್ಲಿದ್ದ ಬರೋಬ್ಬರಿ 103 ಕೆಜಿ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.
ತಮಿಳುನಾಡು ಅಪರಾಧ ಶಾಖೆ -ಸಿಐಡಿ ಪೊಲೀಸರಿಗೆ ತನಿಖೆ ನಡೆಸಲು ನಿರ್ದೇಶನ ನೀಡಲಾಗಿದೆ. ಎಸ್.ಪಿ. ಶ್ರೇಣಿಯ ಅಧಿಕಾರಿಗೆ ತನಿಖೆ ನೇತೃತ್ವವಹಿಸಿ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ತಿಳಿಸಿದೆ.
2012 ರಲ್ಲಿ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಸಿಬಿಐನಿಂದ 447 ಕೆಜಿ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿತ್ತು. ಸಿಬಿಐನ ಲಾಕ್ ಮತ್ತು ಸೀಲ್ ಅಡಿಯಲ್ಲಿ ಸುರಕ್ಷಿತ ಸ್ಥಳದಲ್ಲಿ ಚಿನ್ನ ಇಡಲಾಗಿತ್ತು. ಇತ್ತೀಚೆಗೆ ಲಾಲ್ ತೆರೆದಾಗ 103 ಕೆಜಿ ಚಿನ್ನ ಕಾಣೆಯಾಗಿದೆ ಎಂದು ತಿಳಿದುಬಂದಿದೆ.
ಚಿನ್ನವನ್ನು ಇಡಲಾಗಿದ್ದ ಲಾಕರ್ ಗಳ 72 ಕೀಗಳನ್ನು ಚೆನ್ನೈನ ಪ್ರಧಾನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಚಿನ್ನ ವಶಪಡಿಸಿಕೊಳ್ಳುವ ಸಮಯದಲ್ಲಿ ಚಿನ್ನದ ಸರಳುಗಳನ್ನು ಒಟ್ಟಿಗೆ ತೂಕ ಮಾಡಲಾಗಿದೆ. ಆದರೆ, ಸುರಾನಾ ಮತ್ತು ಎಸ್.ಬಿ.ಐ. ನಡುವಿನ ಸಾಲಗಳ ಇತ್ಯರ್ಥಕ್ಕೆ ನೇಮಕಗೊಂಡ ಲಿಕ್ವಿಡೇಟರ್ ಗೆ ಚಿನ್ನ ಹಸ್ತಾಂತರಿಸುವಾಗ ಅದನ್ನು ಪ್ರತ್ಯೇಕವಾಗಿ ತೂಕ ಮಾಡಲಾಗಿದೆ. 103 ಕೆಜಿ ಚಿನ್ನದ ವ್ಯತ್ಯಾಸಕ್ಕೆ ಇದು ಕಾರಣ. ಚಿನ್ನ ನಾಪತ್ತೆಯಾಗಿಲ್ಲ ಎಂದು ಸಿಬಿಐ ಹೇಳಿದೆ.