ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿಡಲಾಗಿದ್ದ 101 ಲ್ಯಾಪ್ಟಾಪ್ ಗಳನ್ನು ಕಾರ್ಮಿಕ ಇಲಾಖೆ ಕಚೇರಿಯಿಂದ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಳೆ ಹುಬ್ಬಳ್ಳಿ ಠಾಣೆ ಪೋಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಿಕರ ಮಕ್ಕಳಿಗೆ ವಿತರಿಸಲು 101 ಲ್ಯಾಪ್ಟಾಪ್ ಗಳನ್ನು ಇಲಾಖೆಯ ಕಚೇರಿಯಲ್ಲಿ ತಂದಿಡಲಾಗಿತ್ತು. ಆದರೆ, ತಂದಿಡಲಾಗಿದ್ದ ಲ್ಯಾಪ್ಟಾಪ್ ಗಳು ಕಳುವಾದ ಬಗ್ಗೆ ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ದೂರು ನೀಡಿದ್ದರು.
ಹಳೆ ಹುಬ್ಬಳ್ಳಿ ಠಾಣೆ ಇನ್ಸ್ ಪೆಕ್ಟರ್ ಸುರೇಶ್ ಹುಳ್ಳೂರ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. 55 ಲಕ್ಷ ರೂಪಾಯಿ ಮೌಲ್ಯದ ಹೆಚ್.ಪಿ. ಕಂಪನಿಯ ಲ್ಯಾಪ್ಟಾಪ್ ಗಳು ಕಳವು ಮಾಡಿದ ಬಗ್ಗೆ ತನಿಖೆ ನಡೆಸಿ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕೆಲಸ ಮಾಡುವ ದೀಪಕ್ ಮತ್ತು ಕೃಷ್ಣ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.
ಎಸ್‌ಡಿಎ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನಾಲ್ಕು ಸಿಬ್ಬಂದಿ ಕೃತ್ಯ ಎಸಗಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಕಿಟಕಿಯಿಂದ ಇಳಿದು 101 ಲ್ಯಾಪ್ಟಾಪ್ ಗಳನ್ನು ಕಳವು ಮಾಡಿದ್ದಾರೆ. ಬಳಿಕ ಅವುಗಳನ್ನು ಮಾರಾಟ ಮಾಡಿದ್ದಾರೆ. ಇನ್ನುಳಿದ 16 ಮಂದಿ ಲ್ಯಾಪ್ಟಾಪ್ ಕಳ್ಳತನಕ್ಕೆ ಪ್ರೇರಣೆ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಲಾಖೆಯ 6 ಜನ ಸಿಬ್ಬಂದಿ ಸೇರಿ 26 ಜನರನ್ನು ಬಂಧಿಸಲಾಗಿದೆ. 83 ಲ್ಯಾಪ್ಟಾಪ್ ಗಳು, ಎರಡು ಆಟೋ, ಎರಡು ಬೈಕ್, ಒಂದು ಕಾರ್ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.