ಆಸ್ಪತ್ರೆಗಳು ಜೀವ ಉಳಿಸುವ ಭರವಸೆ ನೀಡುತ್ತವೆ. ಆದ್ರೆ ಲಂಡನ್ ನ ಒಂದು ಆಸ್ಪತ್ರೆ ಒಂದಲ್ಲ ಎರಡಲ್ಲ ನೂರು ಮಹಿಳೆಯರ ಜೀವನದಲ್ಲಿ ಆಟ ಆಡಿದೆ. ಮಹಿಳೆಯರ ನಂಬಿಕೆಗೆ ಮೋಸ ಮಾಡಿದೆ. ಈ ಮಹಿಳೆಯರಿಗೆ ಕ್ಯಾನ್ಸರ್ ಇತ್ತು. ಗರ್ಭಕೋಶ ತೆಗೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಗರ್ಭಕೋಶ ತೆಗೆಯುವ ಮುನ್ನ ಎಗ್ ಫ್ರೀಜ್ ಮಾಡಲು ಮಹಿಳೆಯರು ಮುಂದಾಗಿದ್ದಾರೆ. ಮುಂದೆ ಮಕ್ಕಳನ್ನು ಪಡೆಯಬಹುದು ಎಂಬ ಆಸೆಯಲ್ಲಿ ಅವರು ಎಗ್ ಫ್ರೀಜ್ ಮಾಡಿದ್ದಾರೆ.
2022 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಎಲ್ಲ ಮಹಿಳೆಯರು ಆಸ್ಪತ್ರೆಯಲ್ಲಿ ಎಗ್ ಫ್ರೀಜ್ ಮಾಡಿದ್ದಾರೆ. ಅದಕ್ಕಾಗಿ ಸ್ವಲ್ಪ ಹಣವನ್ನು ಕೂಡ ಪಾವತಿಸುತ್ತ ಬಂದಿದ್ದಾರೆ. ಆದ್ರೆ ಕೆಲ ದಿನಗಳ ಹಿಂದೆ ಮಹಿಳೆಯರಿಗೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಎಗ್ ಫ್ರೀಜ್ ಮಾಡಿದ್ದ ಬಾಟಲಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಈ ಎಗ್ ನಿಂದ ಮಗು ಪಡೆಯಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಬಾಟಲಿಗಳಲ್ಲಿ ಸಮಸ್ಯೆ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ.
ವಿಷ್ಯ ತಿಳಿದ ನಂತ್ರ ಲಂಡನ್ನ ಮಾನವ ಫಲೀಕರಣ ಪ್ರಾಧಿಕಾರ ಸಕ್ರಿಯವಾಗಿದ್ದು, ಗಂಭೀರವಾಗಿ ತನಿಖೆ ನಡೆಸುತ್ತಿದೆ. ಮಹಿಳೆಯರು ಗರ್ಭ ಧರಿಸುವ ಆಸೆ ಈಡೇರಲು ನೂರಕ್ಕೆ ನೂರರಷ್ಟು ಸಾಧ್ಯವಿಲ್ಲ ಎನ್ನಲಾಗ್ತಿದೆ. ಮಗು ಪಡೆಯುವ ಆಸೆಯಲ್ಲಿದ್ದ ಮಹಿಳೆಯರಿಗೆ ಭೂಮಿ ಕುಸಿದಂತಾಗಿದೆ. ಇದ್ರಲ್ಲಿ ನಮ್ಮ ತಪ್ಪೇನು ಎಂದು ಅವರು ಪ್ರಶ್ನಿಸುತ್ತಿದ್ದಾರೆ.