ಚಿತ್ರದುರ್ಗ: 2022-23ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 35 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸಿವೆ.
ಒಟ್ಟು 1581 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 901 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 638 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಲ್ಲದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಫಲಿತಾಂಶ ವಿಶ್ಲೇಷಣೆಯ Quality Weightage Precentage ನಲ್ಲಿ ಎಲ್ಲಾ 35 ವಸತಿ ಶಾಲೆಗಳು “ಎ” ಗ್ರೇಡ್ ಪಡೆಯುವ ಮೂಲಕ ವಸತಿ ಶಾಲೆಗಳ ಹಿರಿಮೆಯನ್ನು ಹೆಚ್ಚಿಸಿರುತ್ತಾರೆ.
ಹೊಳಲ್ಕೆರೆ ತಾಲ್ಲೂಕು ಹನುಮಂತ ದೇವರ ಕಣಿವೆ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಹಿಂ.ವರ್ಗ) ವಿದ್ಯಾರ್ಥಿಯಾದ ಎನ್. ರವಿಕಿರಣ್ ಅವರು 625ಕ್ಕೆ 618(ಶೇ.98.88) ಹಾಗೂ ಚಿತ್ರದುರ್ಗ ತಾಲ್ಲೂಕು ಬೊಮ್ಮೇನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಪಿ.ವರ್ಷಣಿ 625ಕ್ಕೆ 616(ಶೇ.98.56) ಅಂಕಗಳನ್ನು ಪಡೆಯುವ ಮೂಲಕ ವಸತಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ಸರ್ಕಾರಿ ವಸತಿ ಶಾಲೆಗಳಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿ ವರ್ಗ, ಉಚಿತ ಊಟ-ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಪ್ರಯೋಗಾಲಯ, ಕಂಪ್ಯೂಟರ್ ಮತ್ತು ಸಂಗೀತ ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ವಸತಿ ಶಾಲೆಗಳಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.