ಜಗತ್ತಿನ ಪ್ರತಿಯೊಂದು ದೇಶವೂ ವಿಭಿನ್ನವಾಗಿಯೇ ಇದೆ. ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ವಿಶೇಷತೆಯಿದೆ. 100 ಪ್ರತಿಶತದಷ್ಟು ಜನರು ವಿದ್ಯಾವಂತರೇ ಇರುವ ದೇಶವೊಂದು ನಮ್ಮಲ್ಲಿದೆ. ವಿಚಿತ್ರವೆಂದರೆ ಈ ದೇಶ ತನ್ನದೇ ಆದ ಸೈನ್ಯವನ್ನೇ ಹೊಂದಿಲ್ಲ. ಇಲ್ಲಿ ವಿಮಾನ ನಿಲ್ದಾಣಗಳೂ ಇಲ್ಲ.
ನಾವ್ ಹೇಳ್ತಿರೋದು ಫ್ರಾನ್ಸ್ ಮತ್ತು ಸ್ಪೇನ್ ನಡುವೆ ಇರುವ ಅಂಡೋರಾ ದೇಶದ ಬಗ್ಗೆ. ವಿಶ್ವದ ಚಿಕ್ಕ ದೇಶಗಳ ಪೈಕಿ ಅಂಡೋರಾ ಕೂಡ ಒಂದು. ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ವೆಬ್ಸೈಟ್ನ ವರದಿಯ ಪ್ರಕಾರ ಅಂಡೋರಾದಲ್ಲಿ 100 ಪ್ರತಿಶತದಷ್ಟು ಜನರು ಸಾಕ್ಷರರಾಗಿದ್ದಾರೆ. ಇಲ್ಲಿ ಸಾಕ್ಷರತೆ ಪ್ರಮಾಣ ಶೇ.100 ರಷ್ಟಿದೆ.
ಈ ದೇಶದ ಜನಸಂಖ್ಯೆ ಸುಮಾರು 80 ಸಾವಿರ ಅಷ್ಟೆ. ಒಟ್ಟು ವಿಸ್ತೀರ್ಣ 468 ಚದರ ಕಿಲೋಮೀಟರ್ ಇದೆ. ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ಪೈರಿನೀಸ್ ಪರ್ವತಗಳ ಮೇಲೆ ಅಂಡೋರಾ ನೆಲೆಗೊಂಡಿದೆ. ವಿಶೇಷ ಅಂದ್ರೆ ಇದೊಂದು ಪ್ರಭುತ್ವ ಪಡೆದಿರುವ ದೇಶವಾಗಿದೆ.
ಅಂಡೋರಾಗೆ ಭೇಟಿ ನೀಡಲು ಇಚ್ಛಿಸುವವರು ನೆರೆರಾಷ್ಟ್ರವಾದ ಸ್ಪೇನ್ನ ಲಾ ಸೆಯು ಡಿ ಉರ್ಗೆಲ್ ನಗರದಲ್ಲಿ ನೆಲೆಗೊಂಡಿರುವ ಅಂಡೋರಾ-ಲಾ ಸೆಯು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಯಾಕಂದ್ರೆ ಅಂಡೋರಾ ದೇಶವು ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇದು ಪರ್ವತಗಳ ಮೇಲೆ ಇರುವುದರಿಂದ ಇಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಅಸಾಧ್ಯ. ಈ ದೇಶದ ಸ್ಕೀ ರೆಸಾರ್ಟ್ಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಆದ್ದರಿಂದ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ.
ಅಂಡೋರಾದಲ್ಲಿ ಇನ್ನೊಂದು ವಿಶೇಷವಿದೆ. ವಾಸ್ತವವಾಗಿ ಈ ದೇಶಕ್ಕೆ ತನ್ನದೇ ಆದ ಸೈನ್ಯವಿಲ್ಲ ಅಥವಾ ಯಾವುದೇ ಸಶಸ್ತ್ರ ಪಡೆ ಇಲ್ಲ. ಈ ದೇಶವು ತನ್ನ ಭದ್ರತೆಗಾಗಿ ಫ್ರಾನ್ಸ್ ಮತ್ತು ಸ್ಪೇನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಆದಾಗ್ಯೂ ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಅಂಡೋರಾ ಸುಮಾರು 600 ಯೋಧರ ಸೈನ್ಯವನ್ನು ಹೊಂದಿತ್ತು. ಅವರು ಅರೆಕಾಲಿಕ ಸೈನಿಕರಾಗಿ ಕೆಲಸ ಮಾಡುತ್ತಿದ್ದರು.
ಅಂಡೋರಾದಲ್ಲಿ ಯುರೋಪಿನಲ್ಲೇ ಅತಿ ಎತ್ತರದ ಗಾಲ್ಫ್ ಕೋರ್ಸ್ ಇದೆ. ಇದನ್ನು ಸಮುದ್ರ ಮಟ್ಟದಿಂದ 2250 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಗಾಲ್ಫ್ ಕೋರ್ಸ್ ತಲುಪಲು ಆಟಗಾರರು ಕೇಬಲ್ ಕಾರ್ ಅನ್ನು ಬಳಸಬೇಕು.