ನವದೆಹಲಿ: ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ರಾಯಭಾರಿಗಳು ಮತ್ತು ಸಂಸದರು ಸೇರಿದಂತೆ 55 ದೇಶಗಳ ಸುಮಾರು 100 ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ವಿಶ್ವ ಹಿಂದೂ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.
ಈ ಭವ್ಯ ಕಾರ್ಯಕ್ರಮವು ರಾಮ್ ಲಲ್ಲಾ ಅವರ ವಿಗ್ರಹದ ಔಪಚಾರಿಕ ಸ್ಥಾಪನೆಗೆ ಸಾಕ್ಷಿಯಾಗಲಿದೆ ಮತ್ತು ಸಿದ್ಧತೆಗಳು ಭರದಿಂದ ಸಾಗಿವೆ.ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಅಮೆರಿಕದಂತಹ ಖಂಡಗಳ 55 ದೇಶಗಳ ನಾಯಕರನ್ನು ರಾಮ ಮಂದಿರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಅತಿಥಿಗಳ ಪಟ್ಟಿಯಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್, ಯುಎಸ್ಎ ಮತ್ತು ಇತರ ಅನೇಕ ದೇಶಗಳ ಗಣ್ಯರು ಸೇರಿದ್ದಾರೆ. ಈ ಅಂತಾರಾಷ್ಟ್ರೀಯ ಗಣ್ಯರು ಜನವರಿ 20 ರಂದು ಲಕ್ನೋಗೆ ಆಗಮಿಸಲಿದ್ದು, ಜನವರಿ 21 ರಂದು ಅಯೋಧ್ಯೆಗೆ ಬರಲಿದ್ದಾರೆ. ವಿಪರೀತ ಚಳಿ ಹಾಗೂ ಮಂಜು ಇರುವುದರಿಂದ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಎರಡು ದಿನ ಮೊದಲೇ ಆಗಮಿಸಲು ಮನವಿ ಮಾಡಲಾಗಿದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಗಣ್ಯರನ್ನು ಆಮಂತ್ರಿಸುವ ಉದ್ದೇಶವಿತ್ತು. ಆದರೆ ಸ್ಥಳಾಭಾವದ ಕಾರಣ ಸಂಖ್ಯೆಯನ್ನು ನೂರಕ್ಕೆ ಸೀಮಿತಗೊಳಿಸಲಾಯಿತು,” ಎಂದು ವಿಎಚ್ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ ಹೇಳಿದ್ದಾರೆ.