ದೇಶದಲ್ಲಿ ರಸ್ತೆ ಮೂಲಸೌಕರ್ಯ ವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಈಗ ಮತ್ತೊಂದು ದಾಖಲೆಯನ್ನು ಬರೆದಿದೆ. ಈ ಹಿಂದೆ 75 ಗಂಟೆಗಳಲ್ಲಿ 75 ಕಿ.ಮೀ. ರಸ್ತೆ ನಿರ್ಮಿಸಿ ದಾಖಲೆ ಬರೆದಿದ್ದು, ಇದೀಗ 100 ಗಂಟೆಗಳ ಅವಧಿಯಲ್ಲಿ 100 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡುವ ಮೂಲಕ ಹಳೆಯ ದಾಖಲೆಯನ್ನು ಮತ್ತಷ್ಟು ಸುಧಾರಿಸಿದೆ.
ಘಾಜಿಯಾಬಾದ್ – ಆಲಿಘಢ ಎಕ್ಸ್ಪ್ರೆಸ್ ವೇ ನಿರ್ಮಾಣ ಯೋಜನೆ ಭಾಗವಾಗಿ ‘ಬಿಟುಮಿನಸ್’ ಕಾಂಕ್ರೀಟ್ ಮೂಲಕ ರಸ್ತೆಯನ್ನು ನಿರ್ಮಿಸಲಾಗಿದ್ದು, 200 ರೋಡ್ ರೋಲರ್ಗಳು ನೆರವಿನಿಂದ ನೂರಾರು ಅಧಿಕಾರಿಗಳು, ಸಾವಿರಾರು ಕಾರ್ಮಿಕರು ಹಗಲು – ರಾತ್ರಿ ಎನ್ನದೆ ಈ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಈಗ ನಿರ್ಮಾಣವಾಗಿರುವ ಎಕ್ಸ್ಪ್ರೆಸ್ ವೇ ಉತ್ತರ ಪ್ರದೇಶದ ದಾದ್ರಿ, ಗೌತಮ ಬುದ್ಧ ನಗರ, ಸಿಕಂದರಾಬಾದ್, ಬುಲಂದ್ ಶಹರ್ ಮತ್ತು ಕುಜ್ರಾ ನಗರಗಳನ್ನು ಹಾದು ಹೋಗಲಿದ್ದು, ವಾಣಿಜ್ಯ ವಹಿವಾಟು, ಕೃಷಿ ಚಟುವಟಿಕೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಅನುಕೂಲವಾಗುತ್ತದೆ. ಒಟ್ಟು ಆರು ಪಥದ 126 ಕಿಮೀ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ 1600 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.