ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ಮೇಲೆ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ತಡೆ ನೀಡುವಂತೆ ಅಧಿಕಾರಿ ಮನವಿ ಮಾಡಿದ್ದರು. ಆದರೆ, ಮದ್ರಾಸ್ ಹೈಕೋರ್ಟ್ ಅಧಿಕಾರಿಯ ಮನವಿ ತಿರಸ್ಕರಿಸಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪ ಕೇಳಿ ಬಂದ ಕಾರಣ 2013ರಲ್ಲಿ ಮೂವರು ಕ್ರಿಕೆಟ್ ಆಟಗಾರರನ್ನು ಬಂಧಿಸಲಾಗಿತ್ತು. ಫಿಕ್ಸಿಂಗ್ ಪ್ರಕರಣದಲ್ಲಿ ಚೆನ್ನೈ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು.
ಈ ಪ್ರಕರಣದಲ್ಲಿ ಧೋನಿ ಕೂಡ ಭಾಗಿಯಾದ್ದಾರೆ ಎಂಬ ಸುದ್ದಿ ಹಲವು ಮಾಧ್ಯಮಗಳು ಪ್ರಸಾರವಾಗಿದ್ದು, ಇದಕ್ಕೆ ತನಿಖಾಧಿಕಾರಿ ಸಂಪತ್ ಕುಮಾರ್ ಸೇರಿದಂತೆ ಅನೇಕರು ಕಾರಣ ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. 2014ರಲ್ಲಿ ಧೋನಿ, ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ವಿರುದ್ಧ 100 ಕೋಟಿ ರೂಪಾಯಿಯ ಮಾನನಷ್ಟ ಅರ್ಜಿ ಸಲ್ಲಿಸಿದ್ದರು.
ಆರೋಪಿಗಳು ತಮ್ಮ ವಿರುದ್ಧ ಗಂಭೀರ ಸುಳ್ಳು ಆರೋಪ ಹಾಗೂ ಹೇಳಿಕೆ ನೀಡುತ್ತಿದ್ದಾರೆ ಎಂದು ಧೋನಿ ಪರವಾಗಿ ಸಲ್ಲಿಸಲಾದ ಮಾನನಷ್ಟ ಅರ್ಜಿಯಲ್ಲಿ ಹೇಳಲಾಗಿತ್ತು. ಹೀಗಾಗಿ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು.