100ಕ್ಕೂ ಹೆಚ್ಚು ಮಹಿಳೆಯರ ಮೇಲಿನ ಅತ್ಯಾಚಾರ ಆರೋಪ ಮತ್ತು ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ, ಜಲೇಬಿ ಬಾಬಾನಿಗೆ ಹರ್ಯಾಣದ ಫತೇಹಾಬಾದ್‌ನ ತ್ವರಿತ ಗತಿ ನ್ಯಾಯಾಲಯವು 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಅಮರಪುರಿ ಅಥವಾ ಜಲೇಬಿ ಬಾಬಾ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವನಿಗೆ 100 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೃತ್ಯದ ವೀಡಿಯೊ ಕ್ಲಿಪ್‌ಗಳನ್ನು ಮಾಡಿದ್ದಕ್ಕಾಗಿ ಜೈಲು ಶಿಕ್ಷೆ ಪ್ರಕಟವಾಗಿದೆ.
ಆರೋಪಿ ಸಹಾಯ ಕೇಳಲು ಬರುವ ಮಹಿಳೆಯರಿಗೆ ಮಾದಕ ವಸ್ತು ನೀಡಿ ಅತ್ಯಾಚಾರವೆಸಗುತ್ತಿದ್ದ. ಕೃತ್ಯವನ್ನು ರೆಕಾರ್ಡ್ ಮಾಡುತ್ತಿದ್ದ ಆತ, ನಂತರ ವಿಡಿಯೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಲ್ವಂತ್ ಸಿಂಗ್ ಅವರು, 63 ವರ್ಷದ ಅಮರಪುರಿ ಬಾಬಾನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಅಪ್ರಾಪ್ತ ವಯಸ್ಕರನ್ನು ಎರಡು ಬಾರಿ ಅತ್ಯಾಚಾರಕ್ಕಾಗಿ 14 ವರ್ಷಗಳ ಜೈಲು, ಸೆಕ್ಷನ್ 376 ರ ಅಡಿಯಲ್ಲಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಭಾರತೀಯ ದಂಡ ಸಂಹಿತೆಯ ಸಿ ಮತ್ತು ಐಟಿ ಕಾಯಿದೆಯ ಸೆಕ್ಷನ್ 67-ಎ ಅಡಿಯಲ್ಲಿ 5 ವರ್ಷ ಜೈಲು ವಿಧಿಸಲಾಗಿದೆ. ಆದಾಗ್ಯೂ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಯಿತು.
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ನಡೆಯುತ್ತವೆ ಮತ್ತು ಈತ 14 ವರ್ಷಗಳನ್ನು ಜೈಲಿನಲ್ಲಿ ಕಳೆಯುತ್ತಾನೆ ಎಂದು ಸಂತ್ರಸ್ತರ ಪರ ವಕೀಲ ಸಂಜಯ್ ವರ್ಮಾ ಹೇಳಿದ್ದಾರೆ.
ಅಮರಪುರಿ ಅಲಿಯಾಸ್ ಬಿಲ್ಲು ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವ ಅಮರವೀರ್‌ನನ್ನು ಅತ್ಯಾಚಾರದ ಆರೋಪದಡಿಯಲ್ಲಿ ಫತೇಹಾಬಾದ್ ನ್ಯಾಯಾಲಯವು ಜನವರಿ 5 ರಂದು ದೋಷಿ ಎಂದು ತೀರ್ಪು ನೀಡಿದೆ.
ಹರಿಯಾಣ ಪೊಲೀಸರು 2018 ರಲ್ಲಿ ಫತೇಹಾಬಾದ್‌ನ ತೋಹಾನಾ ಪಟ್ಟಣದಿಂದ ಈತನನ್ನು ಬಂಧಿಸಿ, ಅವನ ಮೊಬೈಲ್ ಫೋನ್‌ನಿಂದ 120 ಲೈಂಗಿಕ ವೀಡಿಯೊ ಕ್ಲಿಪ್ಪಿಂಗ್‌ಗಳನ್ನು ವಶಪಡಿಸಿಕೊಂಡಿದ್ದರು.