ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ರನ್ನು ಗಲ್ಲಿಗೇರಿಸುವ ದೃಶ್ಯದ ನಾಟಕಕ್ಕೆ ತರಬೇತಿ ಪಡೆಯುತ್ತಿದ್ದ ವೇಳೆ 10 ವರ್ಷದ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಬಾಬತ್ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಶಿವಂ ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಈ ನಾಟಕ ಪ್ರದರ್ಶನ ಮಾಡುವ ಸಲುವಾಗಿ ಶಿವಂ ಹಾಗೂ ಆತನ ಸ್ನೇಹಿತರು ಪ್ರ್ಯಾಕ್ಟಿಸ್ ಮಾಡುತ್ತಿದ್ದರು ಎನ್ನಲಾಗಿದೆ.
ನಾಟಕದ ತಾಲೀಮು ಮಾಡುವ ಸಲುವಾಗಿ ಶಿವಂ ಸ್ನೇಹಿತರು ಗುರುವಾರ ಶಿವಂ ನಿವಾಸಕ್ಕೆ ಆಗಮಿಸಿದ್ದರು. ಕೊನೆಯ ದೃಶ್ಯದ ತಾಲೀಮು ನಡೆಸುತ್ತಿದ್ದ ವೇಳೆ ಶಿವಂ ಸ್ಟೂಲ್ ಮೇಲೆ ನಿಂತು ಕುತ್ತಿಗೆಗೆ ನೇಣು ಕುಣಿಕೆಯನ್ನು ಬಿಗಿದುಕೊಂಡಿದ್ದ. ಆದರೆ ಅಚಾನಕ್ಕಾಗಿ ಸ್ಟೂಲಿನಿಂದ ಕಾಲು ಜಾರಿದ ಪರಿಣಾಮ ಶಿವಂ ಸಾವನ್ನಪ್ಪಿದ್ದಾನೆ.
ಶಿವಂ ಉಸಿರಾಡಲು ಕಷ್ಟ ಪಡುತ್ತಿದ್ದ. ಆದರೆ ಆತನ ಸ್ನೇಹಿತರು ಈತ ನಟಿಸುತ್ತಿದ್ದಾನೆ ಎಂದೇ ಭಾವಿಸಿದ್ದರಂತೆ. ಆದರೆ ಯಾವಾಗ ಶಿವಂ ದೇಹ ಅಲುಗಾಡೋದು ನಿಂತಿತೋ ಆಗ ಸ್ನೇಹಿತರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಅಲ್ಲಿಂದ ಓಡಿದ ಸ್ನೇಹಿತರು ಸಹಾಯಕ್ಕಾಗಿ ಗ್ರಾಮಸ್ಥರನ್ನು ಕೂಗಿದ್ದಾರೆ. ಆದರೆ ಸಹಾಯಕ್ಕಾಗಿ ಯಾರಾದರೂ ಧಾವಿಸುವ ಮೊದಲೇ ಶಿವಂ ಅಸುನೀಗಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಶಿವಂ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.