ಕೋಲ್ಕತ್ತಾದ ಕಾಲಿಘಾಟ್‌ನಲ್ಲಿ ಮದುವೆ ಸಮಾರಂಭದ ವೇಳೆ 10 ತಿಂಗಳ ಮಗುವೊಂದು ನಾಪತ್ತೆಯಾಗಿತ್ತು. ಮಗುವಿನ ಪೋಷಕರಾದ ಸುಭಾಷ್ ಸಾಹು ಮತ್ತು ಖುಷ್ಬು ದೇವಿ ಅವರು ಕಾಳಿಘಾಟ್‌ನಲ್ಲಿರುವ ಭಾರತ್ ಸೇವಾಶ್ರಮ ಸಂಘದಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಸಮಾರಂಭದಲ್ಲಿ ಮಗು ಖುಷ್ಬೂ ದೇವಿ ಜೊತೆಗಿತ್ತು. ಈ ವೇಳೆ ಅಳುತ್ತಿದ್ದ ಮಗುವನ್ನು ಕೆಲಕಾಲ ಹಿಡಿದುಕೊಳ್ಳಲು ಮುಂದಾದ ಅಪರಿಚಿತ ವ್ಯಕ್ತಿಗೆ ತಾಯಿ ಮಗುವನ್ನ ನೀಡಿದ್ದರು. ಸಂಜೆ ನಂತರ ಖುಷ್ಬು ದೇವಿ ತನ್ನ ಮಗುವಿನೊಂದಿಗೆ ವ್ಯಕ್ತಿ ಕಾಣೆಯಾಗಿರುವುದನ್ನು ಗಮನಿಸಿದರು.
ಸುಮಾರು ಎರಡು ಗಂಟೆಗಳ ಕಾಲ ಮಗುವನ್ನು ಹುಡುಕಿದರೂ ಸಿಗಲಿಲ್ಲ. ಕೊನೆಗೆ ಕಾಳಿಘಾಟ್ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದರು. ಪೊಲೀಸರು ಸ್ಥಳದಲ್ಲಿ ಹುಡುಕಾಟ ನಡೆಸಿ ಅಪಹರಣಕಾರನ ಪತ್ತೆಗೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಅಪಹರಣಕಾರನು ಮಗುವನ್ನು ರಿಕ್ಷಾದಲ್ಲಿ ಕೂರಿಸಿಕೊಂಡು ಹೋಗಿರೋದು ಪತ್ತೆಯಾಗಿತ್ತು. ಹೀಗೆ ಸಾಲು ಸಾಲು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ ನಂತರ ಅಪಹರಣಕಾರನ ಚಲನವಲನವನ್ನು ಪತ್ತೆ ಹಚ್ಚಿದರು.
ಪೊಲೀಸರು ಅಂದೂಲ್‌ಗೆ ತಲುಪಿದಾಗ ಮಗುವಿನ ತಂದೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಕಾಣೆಯಾದ ತಮ್ಮ ಮಗು ಪ್ರದೇಶದ ಪೆಟ್ರೋಲ್ ಪಂಪ್‌ನ ಬಳಿ ಇದೆ ಎಂದು ತಿಳಿಸಿದ್ದರು. ಬಳಿಕ ಕಾಣೆಯಾದ ಮಗುವನ್ನು ಯಾರೋ ಸ್ಥಳೀಯ ದೇವಸ್ಥಾನದ ಮೆಟ್ಟಿಲ ಮೇಲೆ ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಮಗುವನ್ನು ನೋಡಿದ ಕುಟುಂಬದವರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದರು. ಪ್ರಕರಣ ಸಂಬಂಧ ಅಪಹರಣಕಾರನ ಪತ್ತೆಗೆ ತನಿಖೆ ನಡೆಯುತ್ತಿದೆ. ಅಂದೂಲ್‌ನಲ್ಲಿ ನೆಲೆಸಿರುವ ಮಗುವಿನ ಕುಟುಂಬದ ಸಂಬಂಧಿಕರನ್ನು ತನಿಖೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.