ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗಲು ಉತ್ತರಪ್ರದೇಶದ ಸುಲ್ತಾನಪುರಕ್ಕೆ ತೆರಳುವ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸ್ಥಳೀಯ ಚಮ್ಮಾರ ರಾಮ್ ಚೇತ್ ಎಂಬವರ ಅಂಗಡಿಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಚಪ್ಪಲಿ ಹೊಲೆದಿದ್ದು, ಅವುಗಳಿಗೆ ಈಗ ಫುಲ್ ಡಿಮ್ಯಾಂಡ್ ಬಂದಿದೆ. ವ್ಯಕ್ತಿಯೊಬ್ಬರು 10 ಲಕ್ಷ ರೂಪಾಯಿ ನೀಡಿ ಅವುಗಳನ್ನು ಖರೀದಿಸುವುದಾಗಿ ಮುಂದೆ ಬಂದರೂ ರಾಮ್ ಚೇತ್ ಅದನ್ನು ಮಾರಲು ನಿರಾಕರಿಸಿದ್ದಾರೆ.
ರಾಹುಲ್ ಗಾಂಧಿ ಜುಲೈ 26ರಂದು ಸುಲ್ತಾನಪುರಕ್ಕೆ ತೆರಳುವ ವೇಳೆ ಹೊರ ವಲಯದ ವಿದಾಯಕ ನಗರದಲ್ಲಿರುವ ರಾಮ್ ಚೇತ್ ಅವರ ಪುಟ್ಟ ಅಂಗಡಿಗೆ ಭೇಟಿ ನೀಡಿ ಅವರ ಸಂಕಷ್ಟಗಳನ್ನು ಆಲಿಸಿದ್ದರು. ಬಳಿಕ ಅವರಿಂದ ಚಪ್ಪಲಿ ಹಾಗೂ ಶೂ ಸಿದ್ದಪಡಿಸುವ ಮಾಹಿತಿ ಪಡೆದು ತಮ್ಮ ಕೈಯಾರೆ ಚಪ್ಪಲಿಯನ್ನು ಹೊಲೆದಿದ್ದರು. ರಾಹುಲ್ ಗಾಂಧಿ ಭೇಟಿ ಬಳಿಕ ರಾಮ್ ಚೇತ್ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದು, ಬಹಳಷ್ಟು ಮಂದಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದರು.
ಇದರ ಮಧ್ಯೆ ಮಂಗಳವಾರದಂದು ಪ್ರತಾಪಗಢದಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿಯವರು ಹೊಲೆದಿದ್ದ ಚಪ್ಪಲಿಯನ್ನು ತಾವು 5 ಲಕ್ಷ ರೂಪಾಯಿಗಳಿಗೆ ಖರೀದಿಸುವುದಾಗಿ ಹೇಳಿದ್ದಾರೆ. ರಾಮ್ ಚೇತ್ ಇದಕ್ಕೆ ನಿರಾಕರಿಸಿದಾಗ ಆ ವ್ಯಕ್ತಿ 10 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದು, ಆದರೆ ರಾಮಚೇತ್ ಕೋಟಿ ರೂಪಾಯಿ ಕೊಟ್ಟರೂ ನಾನದನ್ನು ಮಾರುವುದಿಲ್ಲ ಎಂದಿದ್ದಾರೆ. ಅಲ್ಲದೆ ಇದನ್ನು ಗಾಜಿನ ಚೌಕಟ್ಟು ಹಾಕಿ ನನ್ನ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.