ನೋಟು ಅಮಾನ್ಯೀಕರಣದ ಸಮಯದಲ್ಲಿ 500 ಮತ್ತು 1000 ರೂಪಾಯಿ ನೋಟುಗಳನ್ನು ಸ್ಥಗಿತಗೊಳಿಸಲಾಗಿತ್ತು. ಅವುಗಳ ಬದಲಿಗೆ ಹೊಸ ನೋಟುಗಳು ಬಂದಿವೆ. ಈ ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚಾಗಬಹುದು ಅನ್ನೋದನ್ನು ಯೋಚಿಸಿದ್ದೀರಾ ? ಸದ್ಯ ಚಲಾವಣೆಯಲ್ಲಿರುವ ಅತಿ ಕಡಿಮೆ ಮೌಲ್ಯದ ನೋಟು 10 ರೂಪಾಯಿ ಆಗಿದ್ರೆ, ಅತ್ಯಧಿಕ ಮೊತ್ತದ ನೋಟು 2000 ರೂಪಾಯಿ.
10 ರೂಪಾಯಿ ನೋಟಿನಿಂದ ಹಿಡಿದು 2000 ರೂಪಾಯಿಯ ನೋಟಿನ ಮುದ್ರಣಕ್ಕೆ ಎಷ್ಟು ಖರ್ಚಾಗುತ್ತದೆ ಅನ್ನೋದನ್ನು ನೋಡೋಣ. ವರದಿಗಳ ಪ್ರಕಾರ 2021-22ರ ಹಣಕಾಸು ವರ್ಷದಲ್ಲಿ 10 ರೂಪಾಯಿಯ ಸಾವಿರ ನೋಟುಗಳನ್ನು ಮುದ್ರಿಸಲು ಆರ್‌ಬಿಐ 960 ರೂಪಾಯಿ ಪಾವತಿಸಿದೆ. 20 ರೂಪಾಯಿಯ ಸಾವಿರ ನೋಟುಗಳ ಮುದ್ರಣಕ್ಕೆ 950 ರೂಪಾಯಿ ಖರ್ಚಾಗಿದೆ.
50 ರೂಪಾಯಿಯ ಸಾವಿರ ನೋಟುಗಳನ್ನು ಮುದ್ರಿಸಲು ಆರ್‌ಬಿಐ ಕಳೆದ ಆರ್ಥಿಕ ವರ್ಷದಲ್ಲಿ 1,130 ರೂಪಾಯಿ ಖರ್ಚು ಮಾಡಿದೆ. ಅದೇ ರೀತಿ 100 ರೂಪಾಯಿ ಮುಖಬೆಲೆಯ ಒಂದು ಸಾವಿರ ನೋಟುಗಳ ಮುದ್ರಣ ವೆಚ್ಚ 1,770 ರೂಪಾಯಿ. 200 ರೂಪಾಯಿಯ ಒಂದು ಸಾವಿರ ನೋಟುಗಳ ಮುದ್ರಣಕ್ಕೆ 2,370 ರೂಪಾಯಿ ವೆಚ್ಚವಾಗಿದ್ರೆ, 500 ರೂಪಾಯಿ ಮುಖಬೆಲೆಯ ಒಂದು ಸಾವಿರ ನೋಟುಗಳನ್ನು ಮುದ್ರಿಸಲು 2,290 ರೂಪಾಯಿ ಖರ್ಚಾಗಿದೆ. 10 ರೂಪಾಯಿ ನೋಟುಗಳ ಮುದ್ರಣದ ವೆಚ್ಚ 20 ರೂಪಾಯಿಗಿಂತ ಹೆಚ್ಚಾಗಿದೆ. ಅದೇ ರೀತಿ 200 ರೂಪಾಯಿ ನೋಟುಗಳನ್ನು ಮುದ್ರಿಸಲು 500 ರೂಪಾಯಿಗಿಂತ ಹೆಚ್ಚು ಖರ್ಚಾಗಿದೆ.
2000 ರೂಪಾಯಿ ನೋಟುಗಳ ಮುದ್ರಣದ ಡೇಟಾ ಲಭ್ಯವಿಲ್ಲ. ಭಾರತದಲ್ಲಿ ನೋಟುಗಳ ಮುದ್ರಣವನ್ನು ನಾಲ್ಕು ಪ್ರೆಸ್‌ಗಳಲ್ಲಿ ಮಾಡಲಾಗುತ್ತದೆ. ಇವುಗಳಲ್ಲಿ ಎರಡು ಪ್ರಿಂಟಿಂಗ್ ಪ್ರೆಸ್‌ಗಳು ಮೈಸೂರು ಮತ್ತು ಸಾಲ್ಬೋನಿಯಲ್ಲಿರುವ RBI ಅಂಗ ಸಂಸ್ಥೆ BRBNMLನಲ್ಲಿವೆ. ನಾಸಿಕ್ ಮತ್ತು ದೇವಾಸ್‌ನಲ್ಲಿರುವ ಇತರ ಎರಡು ಮುದ್ರಣಾಲಯಗಳಲ್ಲೂ ನೋಟುಗಳನ್ನು ಮುದ್ರಿಸಲಾಗುತ್ತದೆ.